ಸಿಪಿಐ ರಾಘವೇಂದ್ರ ಆತ್ಮಹತ್ಯೆ ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಎಸ್ಪಿ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Raghavendra-Suicide

ಮಾಲೂರು,ಅ.18- ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಸರ್ಕಲ್ ಇನ್‍ಸ್ಪೆಕ್ಟರ್ ರಾಘವೇಂದ್ರ(42) ಅವರು ತಮ್ಮ ಸರ್ವೀಸ್ ರಿವಾಲ್ವರ್‍ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ರಾಜ್ಯದಲ್ಲಿ ಪೊ ಲೀಸರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿವೆ.  ಕೋಲಾರ ಜಿಲ್ಲೆಯ ಮಾಲೂರು ಪೊ ಲೀಸ್ ಠಾಣೆಗೆ ಕಳೆದ ಒಂದು ವರ್ಷ, 15 ದಿನಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರಾದ ರಾಘವೇಂದ್ರ ಅವರು, ಇಂದು ನಸುಕಿನಜಾವ 4 ಗಂಟೆ ಸುಮಾರಿನಲ್ಲಿ ಠಾಣೆಯ ತಮ್ಮ ಕಚೇರಿಯ ಚೇರ್‍ನಲ್ಲಿ ರಿವಾಲ್ವರ್‍ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Raghavendra-01

2003ರ ಬ್ಯಾಚ್‍ನ ಇನ್‍ಸ್ಪೆಕ್ಟರ್ ಆಗಿದ್ದ ರಾಘವೇಂದ್ರ ಅವರು ಮೂಲತಃ ವೇಮಗಲ್‍ನ ನರಸಾಪುರದವರು. ಐದು ಜನ ಸಹೋದರರು, ಮೂರು ಜನ ಸಹೋದರಿಯರಲ್ಲಿ ರಾಘವೇಂದ್ರ ಕೊನೆಯವರಾಗಿದ್ದರು. ಮೃತರು ಪತ್ನಿ ಚೈತ್ರ ಹಾಗೂ ಒಂದೂವರೆ ವರ್ಷದ ಪುತ್ರನನ್ನು ಅಗಲಿದ್ದಾರೆ.  ನಂದಗುಡಿ ಪೊ ಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇದಕ್ಕೂ ಮುನ್ನ ಸರ್ಜಾಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇವರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದರು.  ಆತ್ಮಹತ್ಯೆಗೆ ರಾಜಕೀಯ ಒತ್ತಡವೋ, ಮೇಲಾಧಿಕಾರಿಗಳ ಕಿರುಕುಳವೋ ಕೌಟುಂಬಿಕ ಸಮಸ್ಯೆಗಳೋ ಎಂಬ ಯಾವ ಕಾರಣಗಳು ಗೊತ್ತಾಗಿಲ್ಲ. ಸ್ಥಳದಲ್ಲಿ ಡೆತ್‍ನೋಟ್ ಸಿಕ್ಕಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ನಿನ್ನೆ ರಾತ್ರಿ 9ರ ಸುಮಾರಿಗೆ ತಮ್ಮ ಜೀಪ್ ಚಾಲಕ ಮಾರ್ಕಂಡಪ್ಪ ಅವರನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ. ಯಾವುದೋ ಕೇಸ್ ಬಗ್ಗೆ ಮಾತನಾಡಬೇಕಿದೆ ಎಂದು 10.15ಕ್ಕೆ ಸ್ಟೇಷನ್‍ಗೆ ಬಂದು ಮನೆಗೆ ತೆರಳಿದ್ದಾರೆ.

ಯಾವುದೋ ರೈಡ್ ಮಾಡುವುದಿದೆ ಎಂದು ಪತ್ನಿಗೆ ಹೇಳಿ 11.30ರ ಸುಮಾರಿಗೆ ಮತ್ತೆ ಠಾಣೆಗೆ ತೆರಳಿ, ತಮ್ಮ ಕಚೇರಿಯಲ್ಲೇ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಐದಾರು ಬಾರಿ ಮೊಬೈಲ್‍ಗೆ ದೂರವಾಣಿ ಕರೆ ಮಾಡಿದ್ದು, 4 ಗಂಟೆಗೆ ಕೊನೆಯ ಕರೆ ಮಾಡಿದ್ದಾರೆಂದು ಹೇಳಲಾಗಿದೆ.  4.30ರ ಸುಮಾರಿನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ರಾಘವೇಂದ್ರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಫ್‍ಎಸ್‍ಎಲ್ ತಂಡ ಬಂದು ಪರಿಶೀಲನೆ ನಡೆಸಿದೆ.

Raghavendra-2

ಉನ್ನತ ಮಟ್ಟದ ತನಿಖೆ:

ಸರ್ಕಲ್ ಇನ್‍ಸ್ಪೆಕ್ಟರ್ ರಾಘವೇಂದ್ರ ಅವರ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್ಪಿ ದಿವ್ಯಾ ಗೋಪಿನಾಥ್ ತಿಳಿಸಿದ್ದು, ಇಲಾಖೆಯಿಂದ ರಾಘವೇಂದ್ರ ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಎಫ್‍ಎಸ್‍ಎಲ್ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದು, ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ. ಯಾವ ಕಾರಣಕ್ಕೆ ರಾಘವೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿನ್ನೆಲೆ ಏನೆಂಬುದು ತನಿಖೆಯ ನಂತರ ಹೊರಬರಲಿದೆ ಎಂದು ದಿವ್ಯಾಗೋಪಿನಾಥ್ ತಿಳಿಸಿದರು. ಸ್ಥಳಕ್ಕೆ ಐಜಿ ಸೀಮಂತ್‍ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin