ಪ್ರತಿಭಟನೆಗೆ ಸಿಕ್ಕ ಜಯ : ಅಕ್ರಮದ ಆರೋಪದಲ್ಲಿ ರದ್ದುಗೊಂಡಿದ್ದ 362 ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಕೆಎಟಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

KPSC 01
ಬೆಂಗಳೂರು,ಅ.19- ಅಕ್ರಮ ನಡೆದಿದೆ ಎಂಬ ಆರೋಪದಲ್ಲಿ ಕೆಪಿಎಸ್‍ಸಿ ಪ್ರೊಬೆಷನರಿ ಹುದ್ದೆ ನೇಮಕಾತಿ ರದ್ದುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ), 362 ಮಂದಿಯನ್ನು ಮುಂದಿನ ಎರಡು ತಿಂಗಳ ಒಳಗಾಗಿ ನೇಮಕಾತಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಕೆಎಟಿಯ ಈ ಆದೇಶದಿಂದ ಕೆಪಿಎಸ್‍ಸಿ ಅಭ್ಯರ್ಥಿಗಳು ನಡೆಸಿದ್ದ ಬೃಹತ್ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕದಂತಾಗಿದ್ದು , ಈ ಅಭ್ಯರ್ಥಿಗಳು ಭಾರೀ ಸಂತೋಷ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ನಡೆದಿತ್ತು. ಆದರೆ ಕೆಪಿಎಸ್‍ಸಿ(ಕರ್ನಾಟಕ ಲೋಕಸೇವಾ ಆಯೋಗ) ಪರೀಕ್ಷೆ ಹಾಗೂ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣ ಕುರಿತಂತೆ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆಯ ನಂತರ ಅಕ್ರಮ ನಡೆದಿರುವುದಾಗಿ ತಿಳಿದುಬಂದಿತ್ತು. ಈ ಆಧಾರದಲ್ಲಿ ರಾಜ್ಯ ಸರ್ಕಾರವು 2014ರಲ್ಲಿ ನೇಮಕಾತಿಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು.
ಭಾರೀ ಹೋರಾಟ:

ಈ ಸಂದರ್ಭ ವಜಾಗೊಂಡ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದು ಅವರ ಈ ಪ್ರತಿಭಟನೆ ಹಲವು ದಿನಗಳ ಕಾಲ ಮುಂದುವರೆದಿತ್ತು. ಹಲವು ಮಂದಿ ಪ್ರತಿಭಟನಾನಿರತರು ಅಸ್ವಸ್ಥಗೊಂಡಿದ್ದರು. ಇವರ ಈ ಹೋರಾಟಕ್ಕೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.   ನಂತರ ವಜಾಗೊಂಡ ಅಭ್ಯರ್ಥಿಗಳು ಸರ್ಕಾರದ ರದ್ದತಿ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ಅಭ್ಯರ್ಥಿಗಳ ಪರ ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ವಾದಿಸಿದ್ದರು. ಅಂತೂ ಕೊನೆಗೆ ಅಭ್ಯರ್ಥಿಗಳ ಹೋರಾಟಕ್ಕೆ ಜಯ ದೊರೆತಿದೆ.

ಎರಡು ತಿಂಗಳಲ್ಲಿ ಆದೇಶ ಹೊರಡಿಸಿ:

362 ಮಂದಿ ವಜಾಗೊಂಡ ಅಭ್ಯರ್ಥಿಗಳನ್ನು ನೇಮಕ ಮಾಡಿ ಇನ್ನು ಎರಡು ತಿಂಗಳೊಳಗಾಗಿ ನೇಮಕಾತಿ ಆದೇಶವನ್ನು ಹೊರಡಿಸಬೇಕು. ಈ ಬಗ್ಗೆ ತಮಗೆ ಮಾಹಿತಿ ನೀಡಬೇಕು ಎಂದು ಕೆಎಟಿ ಸೂಚಿಸಿದೆ. ಕೆಲಸ ಕಳೆದುಕೊಂಡಿರುವ 362 ಅಭ್ಯರ್ಥಿಗಳಿಗೆ ಕೆಲಸ ಕೊಡಿ. ಇದರಲ್ಲಿ ಯಾವುದೇ ತರ್ಕಕ್ಕೆ, ವಾದಕ್ಕೆ ಅವಕಾಶವಿಲ್ಲ ಎಂದು ಕೆಎಟಿ ಸ್ಪಷ್ಟಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin