ರುದ್ರೇಶ್ ಹಂತಕರ ಫೋಟೊ ಬಿಡುಗಡೆ, ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

Rudresh-Murderer

ಬೆಂಗಳೂರು,ಅ.20- ಕಾಮರಾಜ ರಸ್ತೆಯಲ್ಲಿ ಹಾಡುಹಗಲೇ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಹಂತಕರ ಫೋಟೋಗಳನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ರವಾನಿಸಿ ಆರೋಪಿಗಳ ಬಂಧನಕ್ಕೆ ಸಿಸಿಬಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.  ರಾಜ್ಯದ ಠಾಣೆಗಳಲ್ಲದೆ ಹೊರರಾಜ್ಯದ ಠಾಣೆಗಳಿಗೂ ಸಹ ಹಂತಕರ ಫೋಟೋಗಳನ್ನು ಕಳುಹಿಸಿದ್ದು ಹೆಚ್ದ್ಚಿನ ಮಾಹಿತಿಗಾಗಿ ತನಿಖಾ ತಂಡಗಳು ಹೊರ ರಾಜ್ಯಗಳಿಗೆ ತೆರಳಿ ಮಾಹಿತಿಗಳನ್ನು ಕಲೆ ಕಲೆ ಹಾಕುತ್ತಿವೆ.  ಸಿಸಿಬಿಯ ತಾಂತ್ರಿಕ ವಿಭಾಗದ ಪೊಲೀಸರು ಅಂದು ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಿದ ವೇಳೆ ದೊರೆತ ಹಲವು ಮಾಹಿತಿ ಹಾಗೂ ಆ ರಸ್ತೆಗಳಲ್ಲಿನ ಸಿಸಿಟಿವಿಯ ಪುಟೇಜ್ಗಳನ್ನು ಪಡೆದು ಪರಿಶೀಲಿಸಿದರು. ಬೈಕ್ನಲ್ಲಿ ಆರೋಪಿಗಳು ಹೋಗುತ್ತಿದ್ದ ಫೋಟೋವನ್ನು ಪಡೆದುಕೊಂಡು ಎಲ್ಲ ಕಡೆ ರವಾನಿಸಿದ್ದಾರೆ.

ಈ ಹಿಂದೆ ಮೈಸೂರು, ಮಂಗಳೂರಿನಲ್ಲಿ ಸಹ ಆರ್ಎಸ್ಎಸ್ ಕಾರ್ಯಕರ್ತರ ಕೊಲೆ ನಡೆದಿದ್ದು, ತನಿಖಾ ತಂಡಗಳು ಅಲ್ಲಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿವೆ.  ಕೇರಳ, ತಮಿಳುನಾಡಿಗೆ ತೆರಳಿರುವ ತನಿಖಾ ತಂಡಗಳು ಆರೋಪಿಗಳ ಫೋಟೊ ತೋರಿಸಿ ವಿಷಯ ಸಂಗ್ರಹಿಸುತ್ತಿವೆ.  ಘಟನಾ ಸ್ಥಳದಲ್ಲಿ ದೊರೆತ ಕುರುಹು ಹಾಗೂ ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದ ಇಬ್ಬರು ಬೈಕ್ ಸವಾರರ ಹಾವಭಾವ, ಚಹರೆ ಗಮನಿಸಿ ರೇಖಾಚಿತ್ರ ತಯಾರಿಸಲಾಗಿತ್ತು.  ಹಂತಕರ ಫೋಟೋಗಳನ್ನು ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಹಂತಕರ ಚಹರೆ ಸ್ಪಷ್ಟವಾಗಿ ಗೋಚರವಾಗದಿದ್ದರೂ ಹಳೆ ಬೈಕ್ನಲ್ಲಿ ಬಂದಿದ್ದ ಸವಾರ ಹೆಲ್ಮೆಟ್ ಧರಿಸಿರುವುದು, ಹಿಂಬದಿ ಸವಾರ ಮಂಕಿ ಕ್ಯಾಪ್ ಧರಿಸಿರುವುದನ್ನು ಆಧರಿಸಿ ರೇಖಾಚಿತ್ರ ತಯಾರಿಸುವ ಮೂಲಕ ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರುದ್ರೇಶ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಲಭ್ಯವಾಗಬಹುದೇ ಎಂಬ ಬಗ್ಗೆ ಪೊಲೀಸರು ಅವರ ಸಂಬಂಧಿಕರ ವಿಚಾರಣೆಗೂ ನಿರ್ಧರಿಸಿದ್ದಾರೆ. ಒಟ್ಟಾರೆ ಎಲ್ಲ ಆಯಾಮಗಳಿಂದಲೂ ತನಿಖೆ ತೀವ್ರಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin