ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

aravind-malagatti
ಬೆಂಗಳೂರು, ಅ.23-ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ತರುವುದು ಸೇರಿದಂತೆ ದಲಿತರಿಗೆ ಭೂಮಿ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಅರವಿಂದ ಮಾಲಗತ್ತಿ ಒತ್ತಾಯಿಸಿದರು.  ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತರಿಗೆ ಭೂಮಿ, ಮನೆ, ನಿವೇಶನ ಹಾಗೂ ಉದ್ಯೋಗ ವಿಚಾರ ಸಂಕಿರಣ ಹಾಗೂ ನೀಲಿ ಬಾನಿನಲ್ಲಿ ಕೆಂಪು ಸೂರ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರಿಗೆ ಭೂಮಿ, ಮನೆ, ನಿವೇಶನದ ಅಗತ್ಯವಿದೆ. ಉದ್ಯೋಗ ನೀಡಿದರೆ ಮನೆಯನ್ನು ಅವರೇ ಸಂಪಾದಿಸಿಕೊಳ್ಳುತ್ತಾರೆ.

ಈ ದಿಸೆಯಲ್ಲಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಹಾಗೂ ಸರ್ಕಾರಿ ಒಡೆತನದ ಭೂಮಿಯನ್ನು ಕೃಷಿಗೆ ನೀಡುವ ಮೂಲಕ ದಲಿತರಿಗೆ ಉದ್ಯೋಗ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.  ಇಂದು ವಿಶ್ವವಿದ್ಯಾನಿಲಯಗಳಲ್ಲಿ ಪೇಮೆಂಟ್‌ಸೀಟ್‌ಗಳ ಹಾವಳಿ ಹೆಚ್ಚಾಗಿದೆ. ಹಣ ಕೊಟ್ಟು ಸೀಟು ಗಿಟ್ಟಿಸಿದವರು ನಾಳೆ ಉದ್ಯೋಗವನ್ನು ಖರೀದಿ ಮಾಡುತ್ತಾರೆ. ಮೆರಿಟ್ ಎಂಬ ಸೋಗಲಾಡಿತನದಿಂದ ಹೊರಬಂದು ದಲಿತರಿಗೆ ವಿದ್ಯೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕಿದೆ ಎಂದರು. ಮೀಸಲಾತಿಯಿಂದ ಪ್ರತಿಭಾ ಪಲಾಯನವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ವಿದೇಶಕ್ಕೆ ಹೋಗುವವರಿಗೆ ಡಾಲರ‍್ಸ್ ಮೇಲಿನ ದುರಾಸೆ ಹೆಚ್ಚಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಭೂಮಿಯನ್ನು ರಾಷ್ಟ್ರೀಕರಣ ಮಾಡಿ ರಾಜಕೀಯ ವಲಯದಲ್ಲಿ ಮೀಸಲಾತಿ ನೀಡಿ ಸರ್ಕಾರಿ ಒಡೆತನದ ಕೃಷಿ ಪದ್ದತಿಯನ್ನು ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಕನಕನನ್ನು ಕೃಷ್ಣ ಮಠದಿಂದ ಹೊರಗಟ್ಟಿದ್ದರು. ನಾವೆಲ್ಲ ಅಲ್ಲಿಗೆ ಹೋದಾಗ ಚರ್ಚಿಸಿದ್ದೆವು. ನಂತರ ಕನಕನನ್ನು ಒಳಗಿಡಲಾಯಿತು. ಇದೀಗ ಕನಕ ಕೋಟೆಯೊಳಗೆ ಬಂಯಾದಂತಾಗಿದ್ದಾನೆ. ಬಂಧನದಲ್ಲಿ ನರಳುತ್ತಿದ್ದಾನೆ. ಅಲ್ಲಿಂದ ಬಿಡುಗಡೆಗೊಳಿಸುವ ಅಗತ್ಯತೆ ಹೆಚ್ಚಾಗಿದೆ ಎಂದರು.  ಉಡುಪಿ ಮಠಕ್ಕೆ ದಲಿತರನ್ನು ಕರೆಸಿಕೊಳ್ಳುವುದು ಜಾತ್ಯತೀತರು ಎಂದು ಹೇಳಿಸಿಕೊಳ್ಳುವುದಕ್ಕೆ ಹೊರತು ಮತ್ತೇನೂ ಅಲ್ಲ ಎಂದು ಹೇಳಿದರು.  ಗಾಂಜಿ ಅವರು ಲೋಟ, ರೋಟಿ, ಬೇಟಿ ಮೂಲಕ ದಲಿತರನ್ನು ತಮ್ಮಂತೆ ಭಾವಿಸಲು ಹೇಳಿದ್ದರು. ಇದರರ್ಥ ಕುಡಿಯುವ ನೀರು ಬಳಸುವ ಲೋಟ, ಊಟ ಹಾಗೂ ಬೇಟಿ ಎಂಬುದು ಸಂಬಂಧ ಬೆಳೆಸುವ ಅರ್ಥವಾಗಿದ್ದು, ನೀರು ಊಟ ಮಾಡಲು ತಾರತಮ್ಯ ನೀತಿ ಇರಬಾರದು. ಅಸ್ಪೃಶ್ಯರು ಅಥವಾ ದಲಿತರು ಎಂಬುದರಿಂದ ಹೊರಬರಬೇಕು. ಜೊತೆಗೆ ಸಂಬಂಧ ಬೆಳೆಸಿ ಈ ಎಲ್ಲ ಪದ್ದತಿಗಳಿಗೂ ತಿಲಾಂಜಲಿ ಹಾಡಬೇಕು ಎಂದು ಹೇಳಿದ್ದರು.  ಆದರೆ ಅಂಬೇಡ್ಕರ್ ಅವರು ಬೇಟಿ ಒಂದೇ ಸಾಕು, ಸಂಬಂಧ ಬೆಳೆಸಿದರೆ ತಾನಾಗಿಯೇ ಲೋಟ, ರೋಟಿ ಸಂಪರ್ಕ ಬೆಳೆಯುತ್ತದೆ ಎಂದು ಪ್ರತಿಪಾದಿಸಿದ್ದರು. ದಲಿತರ ಬಗೆಗಿನ ಇಂಥ ಧೋರಣೆಗಳು ದೂರಾಗಬೇಕಿದೆ ಎಂದರು.  ಸಮಾರಂಭದಲ್ಲಿ ಕರ್ನಾಟಕ ವೆಲ್‌ಫೇರ್ ಅಸೋಸಿಯೇಷನ್ ಆಫ್ ಎಸ್ಸಿ-ಎಸ್ಟಿ ಎಂಪ್ಲಾಯೀಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಸಿ.ವೀರಣ್ಣ, ಕಾರ್ಯದರ್ಶಿ ಎಸ್.ಆನಂದಮೂರ್ತಿ, ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರವಮ್ಮ, ಡಿವೈಎಫ್‌ಐ ಮುಖಂಡ ನಂಜೇಗೌಡ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ, ದಲಿತ ಹಕ್ಕುಗಳ ಸಮಿತಿ ಸಹಸಂಚಾಲಕ ಎನ್.ನಾಗರಾಜ್, ಅಧ್ಯಕ್ಷೆ ಮಾಯೂಶ್ರೀ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin