ನಾಲ್ಕು ಭಾಗವಾಗಿ ಬೆಂಗಳೂರು ವಿಭಜನೆ : ದೇವೇಗೌಡರ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಬೆಂಗಳೂರು,ಅ.24– ನಾಡಪ್ರಭು ಕೆಂಪೇಗೌಡರ ಹೆಸರನ್ನು ಸಹಿಸಿಕೊಳ್ಳಲು ಆಗದವರು ಬೆಂಗಳೂರನ್ನು ನಾಲ್ಕು ಭಾಗವಾಗಿ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಒಕ್ಕಲಿಗರ ಸಂಘ ಹಾಗೂ ಡಾ.ಎಚ್.ಎಂ.ಮರಿಗೌಡ ಆರ್ಟಿಕಲ್ಚರ್ ಎಜುಕೇಷನ್ ಅಂಡ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಎಚ್.ಎಂ.ಮರಿಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಸಹಿಸಲು ಆಗದವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಮಾಡಲು ಹೊರಟಿರುವುದು ತುಂಬ ನೋವು ತಂದಿದೆ. ಯಾವುದೇ ಕಾರಣಕ್ಕೂ ಬೆಂಗಳೂರು ವಿಭಜನೆ ಮಾಡಬಾರದು. ರಾಜಧಾನಿ ಜನರು ಇದನ್ನು ಸಹಿಸುವುದಿಲ್ಲ ಎಂದು ಗೌಡರು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಕೆಲಸ ಮಾಡಿದ ಅನುಭವವಿದೆ. ಹೇಗೆ ಆಡಳಿತ ನಡೆಸುವುದು ಎಂಬುದೂ ನನಗೆ ಗೊತ್ತಿದೆ ಎಂದು ಬೆಂಗಳೂರು ವಿಭಜನೆ ಮಾಡುವುದಕ್ಕೆ ಹೊರಟಿರುವ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವರು.  ನಾನು ಒಂದಲ್ಲ ಎರಡರೆಡು ಬಾರಿ ರಾಜ್ಯದ ರೈತರಿಗೆ ಹಿತಸಕ್ತಿಗಾಗಿ ಖುಷಿಯಿಂದ ರಾಜೀನಾಮೆ ನೀಡಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ. ಇವತ್ತಿಗೂ ನಾನು ಈ ವಿಚಾರವಾಗಿ ಹೋರಾಟ ನಿಲ್ಲಿಸಿಲ್ಲ. ದಿಲ್ಲಿಗೆ ಪ್ರಧಾನಿಯಾಗಿ ನಾನು ಹೋಗಿದ್ದು ದುರಂತ. ನಾನು ಇಲ್ಲೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಿತ್ತು ಎಂದು ಅವರು ಹೇಳಿದರು.

ಮೇಲ್ಮಟ್ಟದಲ್ಲಿ ಭ್ರಷ್ಟಾಚಾರ ನಿಲ್ಲಬೇಕು, ಇಲ್ಲದಿದ್ದರೆ ಕೆಳಗಿನ ಅಧಿಕಾರಿಗಳು ಮೇಲಿನವರನ್ನು ನಕಲು ಮಾಡುತ್ತಾರೆ. ಬೆಂಗಳೂರಿನ ನಾಲ್ಕು ಭಾಗ ಮಾಡಿ ನಾಲ್ಕು ಹೆಸರನ್ನು ನಾಮಕರಣ ಮಾಡಬಹುದೆಂಬ ಉದ್ದೇಶವಿರಬಹುದು. ಇದನ್ನು ಜನರು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೇಳಿದರು.  ತೂಗುಗತ್ತಿ ತಪ್ಪಿಲ್ಲ: ಕಾವೇರಿ ನದಿ ನೀರು ಹಂಚಿಕೆ ವಿವಾದದ ಸುಳಿಯಲ್ಲಿ ಸಿಲುಕಿ ನಾವು ನರಳತ್ತಿದ್ದೇವೆ. ನಾವು ಈ ತೂಗುಗತ್ತಿಯಿಂದ ತಪ್ಪಿಸಿಕೊಂಡಿಲ್ಲ. ಮಳೆ ಅಭಾವ ಹಾಗೂ ಪ್ರಾಕೃತಿಕ ವಿಕೋಪದಿಂದ ರೈತರು ನಾನಾ ಸಂಕಷ್ಟಗಳಿಗೆ ಸಿಲುಕಿದ್ದಾರೆ. ರೈತರು ಬದುಕಬೇಕಾದರೆ ಸಾಂಪ್ರದಾಯಿಕ ಕೃಷಿ ಪದ್ದತಿಗಿಂತ ಆಧುನಿಕ ವ್ಯವಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು.
ಈ ವಿಚಾರ ಬಗ್ಗೆ ನಾಲ್ಕು ಬಾರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ನಮ್ಮ ರೈತರ ಬೆವರಿನ ಹಣದಲ್ಲಿ ನಾವು ಜಲಾಶಯ ಕಟ್ಟುಕೊಂಡರೆ ಇಲ್ಲಿನ ನೀರನ್ನು ಬೇರೆಯವರಿಗೆ ಕೊಡಿ ಅಂತಾರೆ, ನಾನು ಬದುಕಿದ್ದಾಗಲೇ ನಮ್ಮ ಜಲಾಶಯದ ನೀರು ನಮ್ಮ ರೈತರ ಹೊಲಕ್ಕೆ ಹೋಗುತ್ತಿಲ್ಲವಲ್ಲ ಇನ್ನೆಷ್ಟು ದಿನ ಬದುಕಬೇಕು ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾವೇರಿ ವಿಚಾರ ಬಗ್ಗೆ ಹೇಗಾದರೂ ಮಾಡಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲೇಬೇಕೆಂಬ ಮನದಾಸೆಯಿಂದ ವಿಧಾನಸೌಧದ ಕೆಂಗಲ್ ಪ್ರತಿಮೆ ಎದುರು ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡೆ ಎಂದರು.

ಕುರಿಯನ್ ಕ್ಷೀರಕ್ರಾಂತಿ ಮಾಡಿದ್ದಾರೆ. ಡಾ.ಎಂ.ಎಸ್.ಮರಿಗೌಡರು ತೋಟಗಾರಿಕೆ ಬೆಳೆಗಳನ್ನು ಪರಿಚಯಿಸಿ ರೈತರ ಆರ್ಥಿಕ ಸ್ವಾವಲಂಬನೆಗೆ ದಾರಿ ತೋರಿದರು. ಅವರ ಮಾರ್ಗದರ್ಶನದಲ್ಲಿ ರೈತರು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.  ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ಸಂಘದ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಮತ್ತಿತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin