‘ಭ್ರಷ್ಟ ಶಾಸಕರು ಹಾಗೂ ನನ್ನನ್ನು ಮಂಪರು ಪರೀಕ್ಷೆ ಒಳಪಡಿಸಿ’ : ಸಿಎಂಗೆ ಎನ್.ಆರ್ ರಮೇಶ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh

ಬೆಂಗಳೂರು,ಅ.24-ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ 3532 ಕೋಟಿ ರೂ.ಗಳ ಅವ್ಯವಹಾರ ಕುರಿತಂತೆ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಸರ್ಕಾರಕ್ಕೆ ಧೈರ್ಯವಿದ್ದರೆ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ. ಇಲ್ಲವೇ ಆ ಕ್ಷೇತ್ರದ ಶಾಸಕರು ಸೇರಿದಂತೆ ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.  ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿ, 7 ಸಿಎಂಸಿ ಹಾಗೂ ಒಂದು ಟಿಎಂಸಿ ಪ್ರದೇಶಗಳನ್ನೊಳಗೊಂಡ ಯಶವಂತಪುರ, ಕೆ.ಆರ್.ಪುರ, ಆರ್.ಆರ್.ನಗರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರದ ವಿಶೇಷ ಅನುದಾನ, 110 ಹಳ್ಳಿಗಳ ವಿಶೇಷ ಅನುದಾನ, 13 ಹಾಗೂ 14ನೇ ಹಣಕಾಸು ಆಯೋಗದ ಅನುದಾನ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ 3532 ಕೋಟಿ ರೂ. ಬಿಡುಗಡೆಯಾಗಿದೆ.

ಆದರೆ ಈ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶವಂತಪುರ, ಕೆ.ಆರ್.ಪುರ ಹಾಗೂ ಆರ್.ಆರ್.ನಗರ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ. ಅಲ್ಲದೆ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಿರುವ ಕುರಿತಂತೆ ಈಗಾಗಲೇ ನಾನು ಬಿಎಂಟಿಎಫ್, ಎಸಿಬಿಗೆ ದೂರು ನೀಡಿದ್ದೇನೆ ಮಾತ್ರವಲ್ಲ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಿಸಿದ್ದೇನೆ.
ಆದರೂ ಆ ಮೂರು ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಭೈರತಿ ಬಸವರಾಜ್ ಅವರು ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಎನ್.ಆರ್.ರಮೇಶ್ ಅವರು ನನ್ನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ನಾನು ನಿಮಗೆ ಪತ್ರವನ್ನು ಬರೆಯುತ್ತಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳಾಗಿ ನೀವು ಈ ಬೃಹತ್ ಹಗರಣವನ್ನು ಸಿಬಿಐ ಇಲ್ಲವೇ ಸಿಐಡಿ ತನಿಖೆಗೆ ವಹಿಸಬೇಕು. ಇದರ ಜೊತೆಗೆ ಗೃಹ ಸಚಿವಾಲಯದ ಮುಖೇನ ಬ್ಲಾಕ್‍ಮೇಲರ್ ಎಂದು ಜರಿದಿರುವ ಶಾಸಕರು ಹಾಗೂ ನನ್ನನ್ನು ನಾರ್ಕೋ ಅನಾಲಿಸಿಸ್, ಪಾಲಿಗ್ರಾಂ ಇಲ್ಲವೇ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.  ಸಾರ್ವಜನಿಕರ ತೆರಿಗೆ ಹಣದೊಂದಿಗೆ ಚೆಲ್ಲಾಟವಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ನನ್ನ ಬಳಿ ಇದ್ದ ದಾಖಲೆ ಬಿಡುಗಡೆ ಮಾಡುವ ಮೂಲಕ ರಾಜ್ಯದ ಜನತೆಗೆ ಸತ್ಯಾಸತ್ಯತೆಯನ್ನು ತಿಳಿಸಿದ್ದೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin