ನಾಳೆ ಪೆಟ್ರೋಲ್ ಬಂಕ್ ಮಾಲೀಕರಿಂದ ಸಾಂಕೇತಿಕ ಬಂದ್ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Petrol-bunk

ಬೆಂಗಳೂರು, ಅ.25-ಬಹುದಿನಗಳ ಬೇಡಿಕೆಯಾದ ಪೆಟ್ರೋಲ್, ಡೀಸಲ್ ವಿತರಕರ ಕಮೀಷನ್ ದರ ಹೆಚ್ಚಳ, ಅಪೂರ್ವಚಂದ್ರ ಸಮಿತಿ ವರದಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ನಾಳೆ ಸಂಜೆ 7 ಗಂಟೆಯಿಂದ 7.15ರವರೆಗೆ ಬಂಕ್ ಬಂದ್ ಮಾಡುವುದರ ಮೂಲಕ ಸರ್ಕಾರದ ಗಮನ ಸೆಳೆಯುವುದು, ನ.3 ಮತ್ತು 4 ರಂದು ಯಾವುದೇ ರೀತಿಯ ತೈಲಗಳನ್ನು ಬಂಕ್ ಮಾಲೀಕರು ಖರೀದಿ ಮಾಡದೆ ಪ್ರತಿಭಟಿಸಲಿದ್ದೇವೆ ಎಂದು ಪೆಟ್ರೋಲ್-ಡೀಸಲ್ ವಿತರಕರ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಪೂರ್ವಚಂದ್ರ ಸಮಿತಿ ವರದಿಯಂತೆ ಪೆಟ್ರೋಲ್-ಡೀಸಲ್ ಮಾರಾಟದ ಮೇಲಿನ ಕಮೀಷನ್ ದರವನ್ನು ಹೆಚ್ಚಳ ಮಾಡಬೇಕೆಂಬುದು ನಮ್ಮ ಹಲವು ದಿನಗಳ ಬೇಡಿಕೆಯಾಗಿದೆ.
ಸರ್ಕಾರಕ್ಕೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕರ ಖರ್ಚು-ವೆಚ್ಚ ನಿರ್ವಹಿಸುವುದು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿರುವುದರಿಂದ ಸರ್ಕಾರ ಇದರ ಬಗ್ಗೆ ಕಣ್ತೆರೆಯಲಿ ಎಂದು ಅವರು ಮನವಿಮಾಡಿದರು. ಅಪೂರ್ವಚಂದ್ರ ಸಮಿತಿ ವರದಿ ಸರ್ಕಾರದ ಕೈ ಸೇರಿ ಹಲವು ದಿನಗಳಾಗಿದ್ದರೂ ಅನುಷ್ಠಾನ ಮಾಡದೆ ಮೀನಾಮೇಷ ಎಣಿಸುತ್ತಿದೆ. 2011ರಲ್ಲೇ ವರದಿ ಅನುಷ್ಠಾನ ಮಾಡುತ್ತೇನೆ ಎಂದು ಹೇಳಿದ್ದ ಸರ್ಕಾರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯದ ಹೆಸರಿನಲ್ಲಿ ತೈಲ ಕಂಪೆನಿಗಳ ಮಾಲೀಕರು ಖರೀದಿದಾರರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಇದರಿಂದ ನಮಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಥೆನಾಲ್ ಬಳಕೆಗೆ ವೈಜ್ಞಾನಿಕ ವಿಧಾನ ಅನುಸರಿಸುವುದು, ಆಯಿಲ್ ಖರೀದಿಗೆ ಒತ್ತಡ ಹಾಕದಿರುವುದು ಹಾಗೂ ಡೀಲರ್ಸ್ ಆಯ್ಕೆಗೆ ಅನುಸರಿಸುತ್ತಿರುವ ಹೊಸ ಪದ್ಧತಿ ಬದಲಿಗೆ ಹಳೇ ವಿಧಾನವನ್ನೇ ಅನುಸರಿಸುವಂತೆ ಮನವಿ ಮಾಡಿದರು. ತಮ್ಮೆಲ್ಲ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನಸೆಳೆಯಲು ನಾಳೆ ಸಂಜೆ 7 ರಿಂದ 7.15ರವರೆಗೆ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಬಳಿಕ 3 ಮತ್ತು 4ರಂದು ಯಾವುದೇ ತೈಲ ಕಂಪೆನಿಗಳಿಂದ ಪೆಟ್ರೋಲ್, ಡೀಸಲ್ ಖರೀದಿಸುವುದಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ತಾರಾನಾಥ್, ಶ್ರೀರಾಮ್, ವೇಲುಮುರುಗನ್, ಎ.ಎಚ್.ಆನಂದ್ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin