ಯಡಿಯೂರಪ್ಪಗೆ ಬಿಗ್ ರಿಲೀಫ್ : ಕಿಕ್ ಬ್ಯಾಕ್ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು,ಅ.26-ಸೌತ್ ಈಸ್ಟ್ ಮೈನಿಂಗ್ ಗಣಿ ಕಂಪನಿ ಪರಾವನಗಿ ನೀಡಿದ್ದಕ್ಕೆ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್‍ಬ್ಯಾಕ್ ಪಡೆದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇ ಪ್ರಕರಣದ ಎಲ್ಲ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.  ಕಾನೂನು ಸಮರದಲ್ಲಿ ಯಡಿಯೂರಪ್ಪನವರಿಗೆ ಇದು ದೊಡ್ಡ ಗೆಲುವಾಗಿದೆ. ಒಂದು ವೇಳೆ ನ್ಯಾಯಾಲಯ ವ್ಯತಿರಿಕ್ತ ತೀರ್ಪು ನೀಡಿದ್ದರೆ ಯಡಿಯೂರಪ್ಪ ಅವರ ಕುಟುಂಬದ ಎಲ್ಲ ಸದಸ್ಯರು ಜೈಲು ಪಾಲಾಗುವ ಸಂಭವವಿತ್ತು.

Yadiyurappa-002

ಇಂದು ಕಿಕ್ಕಿರಿದು ತುಂಬಿದ್ದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಬಿ.ಧರ್ಮೇಗೌಡರ್ ಪ್ರಕರಣದಿಂದ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ಪ್ರಕಟಿಸುತ್ತಿದ್ದಂತೆ. ಕಟಕಟೆಯಲ್ಲಿ ನಿಂತಿದ್ದ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿತು.  ಬಿ.ಎಸ್.ಯಡಿಯೂರಪ್ಪ ಜೊತೆ ಅವರ ಪುತ್ರ ಹಾಗೂ ಶಿಕಾರಿಪುರದ ಶಾಸಕ ಬಿ.ವೈ.ರಾಘವೇಂದ್ರ, ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್‍ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಜಿಂದಾಲ್ ಕಂಪನಿಯ ಎಲ್ಲ ಅಧಿಕಾರಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿತು.
ಏನಿದು ಪ್ರಕರಣ:

ಈ ಹಿಂದೆ ಯಡಿಯೂರಪ್ಪ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2006ರ ಮಾರ್ಚ್‍ನಿಂದ 2011ರವರೆಗೆ ಜಿಂದಾಲ್ ಸಮೂಹ ಸಂಸ್ಥೆಯ ಸೌತ್ ವೆಸ್ಟ್ ಮೈನಿಂಗ್ ಕಂಪನಿ ಗಣಿ ಪರವಾನಗಿ ಕೊಡಿಸಿದ್ದರು.  ಇದಕ್ಕೆ ಪ್ರತಿಫಲವಾಗಿ ಸೌತ್‍ವೆಸ್ಟ್ ಮೈನಿಂಗ್ ಕಂಪನಿ ಯಡಿಯೂರಪ್ಪ ಒಡೆತನದ ಪ್ರೇರಣಾ ಟ್ರಸ್ಟ್‍ಗೆ 20 ಕೋಟಿ ರೂ. ಸಂದಾಯ ಮಾಡಿದ್ದಾರೆಂಬುದು ಲೋಕಾಯುಕ್ತ ತನಿಖೆಯಿಂದ ಬಹಿರಂಗಗೊಂಡಿತ್ತು.  ಅಂದು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗಡೆಯವರು ರಾಜ್ಯದ ವಿವಿಧೆಡೆ ನಡೆದಿದ್ದ ಅಕ್ರಮ ಗಣಿಗಾರಿಕೆ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಯಡಿಯೂರಪ್ಪ ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಮುಖ್ಯಮಂತ್ರಿ ಕಚೇರಿ ದುರುಪಯೋಗವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನವನ್ನೂ ಸಹ ಕಳೆದುಕೊಂಡಿದ್ದರು.  ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಜಿಂದಲ್ ಸಮೂಹ ಕಂಪನಿ ಏಕಾಏಕಿ ಪ್ರೇರಣಾ ಟ್ರಸ್ಟ್‍ಗೆ 20 ಕೋಟಿ ದೇಣಿಗೆ ನೀಡಲು ಹೇಗೆ ಸಾಧ್ಯ ಎಂಬುದನ್ನು ವರದಿಯಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಯಡಿಯೂರಪ್ಪ ಪುತ್ರರಾದ ವಿಜಯೇಂದ್ರ, ರಾಘವೇಂದ್ರ , ಅಳಿಯ ಸೋಹಾನ್ ಕುಮಾರ್ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಂತಿಮವಾಗಿ ಹಗ್ಗಜಗ್ಗಾಟ ನಡೆದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯ ಎದುರಾಗಿತ್ತು.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರಕರಣ:

ಸೌತ್ ವೆಸ್ಟ್ ಮೈನಿಂಗ್ ಕಂಪನಿ ಪರವಾನಗಿ ವಿಚಾರದಲ್ಲಿ ಅವ್ಯವಹಾರ ನಡೆದಿರುವುದರಿಂದ ತನಿಖೆ ನಡೆಸಲು ಆದೇಶಿಸುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಸುಪ್ರೀಂಕೋರ್ಟ್‍ಗೆ ವಿಶೇಷ ಅರ್ಜಿ ಸಲ್ಲಿಸಿದ್ದರು.  ಅರ್ಜಿ ವಿಚಾರಣೆ ನಡೆಸಿದ ಹಸಿರುನ್ಯಾಯ ಪೀಠ ತನಿಖೆ ನಡೆಸುವ ಸಂಬಂಧ ಉನ್ನತ ಅಧಿಕಾರಿಗಳ ಸಮಿತಿ ರಚಿಸಿತ್ತು. ಅಂತಿಮವಾಗಿ ಸಮಿತಿ ನೀಡಿದ ಶಿಫಾರಸ್ಸಿನಂತೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸೂಚಿಸಿತ್ತು.  ಬಿಎಸ್‍ವೈ ನಿವಾಸದ ಮೇಲೆ ದಾಳಿ: ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡುತ್ತಿದ್ದಂತೆ ತನಿಖಾ ತಂಡ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಹಾಗೂ ವಿಜಯೇಂದ್ರ, ರಾಘವೇಂದ್ರ, ಸೋಹಾನ್‍ಕುಮಾರ್ ಅವರ ಕಚೇರಿ ನಿವಾಸಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಈ ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು 2016, ಮೇ 23ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಯಡಿಯೂರಪ್ಪನವರಿಗೆ ಅಂದಿನ ನ್ಯಾಯಾಧೀಶರು ಒಟ್ಟು 473 ಪ್ರಶ್ನೆಗಳನ್ನು ಮುಂದಿಟ್ಟಿದ್ದರು.
ಇದಕ್ಕೆ ಕಟಕಟೆಯಲ್ಲಿ ಉತ್ತರಿಸುತ್ತಿದ್ದ ಯಡಿಯೂರಪ್ಪ ಕಣ್ಣೀರು ಹಾಕಿದ್ದಲ್ಲದೆ ನಾನು ಯಾವ ತಪ್ಪು ಮಾಡಿಲ್ಲ. ನನ್ನ ರಾಜಕೀಯ ವಿರೋಧಿಗಳ ಷಡ್ಯಂತ್ರದಿಂದ ನಾನು ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಗದ್ಗರಿತರಾಗಿ ನುಡಿದಿದ್ದರು.  ಒಟ್ಟು 13 ಮಂದಿ ಆರೋಪಿಗಳ ವಿರುದ್ದ ಸಿಬಿಐ ತನಿಖಾ ತಂಡ ವಂಚನೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ , ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಸಲ್ಲಿಸಿತ್ತು.ಹೀಗೆ ಎರಡು ಕಡೆ ವಾದ-ವಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಧರ್ಮಗೌಡರ್ 400 ಪುಟಗಳ ತೀರ್ಪು ಓದಿ ಎಲ್ಲ ಆರೋಪಿಗಳನ್ನು ದೋಷ ಮುಕ್ತಗೊಳಿಸಿದರು.

ಆರೋಪಗಳೇನು:

ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಪ್ರಮುಖವಾಗಿ ಐದು ಗುರುತರವಾದ ಆರೋಪಗಳು ಕೇಳಿಬಂದಿದ್ದವು.
1. ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡು ಜಿಂದಾಲ್ ಕಂಪನಿಯಿಂದ ಕಿಕ್‍ಬ್ಯಾಕ್ ಪಡೆದ ಆರೋಪವಿತ್ತು.
2. ಅದಿರು ರಫ್ತಿಗೆ ನಿಷೇಧ ಹೇರಿ ಜಿಂದಾಲ್ ಕಂಪನಿಗೆ ಗಣಿ ಪರವಾನಗಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 800 ಕೋಟಿ ರೂ. ನಷ್ಟ.
3. ನಷ್ಟದಲ್ಲಿದ್ದ ಜಿಂದಾಲ್ ಕಂಪನಿ ಇದ್ದಕ್ಕಿದ್ದಂತೆ ಯಡಿಯೂರಪ್ಪ ಒಡೆತನದ ಪ್ರೇರಣಾ ಟ್ರಸ್ಟ್‍ಗೆ 20 ಕೋಟಿ ದೇಣಿಗೆ ನೀಡಿರುವುದು ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಮುಖ್ಯಮಂತ್ರಿ ಕಚೇರಿ ದುರುಪಯೋಗವಾಗಿರುವುದು ಸಾಬೀತು.
4. ರಾಚೇನಹಳ್ಳಿ ಸಮೀಪ 1 ಎಕರೆ 2 ಗುಂಟೆ ಜಮೀನನ್ನು ಡಿನೋಟಿಫೈ ಮಾಡಲಾಗಿತ್ತು. ಇದು ಪಾಂಡುರಂಗ, ಗೌರಮ್ಮ ಎಂಬುವರಿಗೆ ಸೇರಿದ್ದಲ್ಲದೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜಿಪಿಎ ಮಾಡಲಾಗಿತ್ತು. ಕೃಷ್ಣಯ್ಯ ಶೆಟ್ಟಿಯಿಂದ ಈ ಜಮೀನನ್ನು ಬಿಎಸ್‍ವೈ ಕುಟುಂಬ 5.22 ಕೋಟಿ ರೂ.ಗೆ ಖರೀದಿಸಿ ಪುತ್ರ ರಾಘವೇಂದ್ರ, ವಿಜಯೇಂದ್ರ ಮತ್ತು ಸುಹಾನ್‍ಕುಮಾರ್ ಹೆಸರಲ್ಲಿ ನೋಂದಣವಾಗಿದೆ.
5. ಯಡಿಯೂರಪ್ಪ ಪುತ್ರರು ರಾಚೇನಹಳ್ಳಿ ಸಮೀಪದ 1 ಗುಂಟೆ 2 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಸುಮಾರು 20 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟ ಮಾಡಿದ್ದರಿಂದ 18.78 ಕೋಟಿ ರೂ. ಲಾಭ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಿಎಸ್‍ವೈ ಸದಸ್ಯರಾಗಿದ್ದ ಸ್ವಾಮಿ ವಿವೇಕಾನಂದ ಟ್ರಸ್ಟ್‍ಗೆ 6 ಕೋಟಿ ರೂ. ದೇಣಿಗೆ ಬಂದಿರುವುದು ಇದೇ ಜಿಂದಾಲ್ ಕಂಪನಿಯಿಂದ.

► Follow us on –  Facebook / Twitter  / Google+

Facebook Comments

Sri Raghav

Admin