ಜೋತಾಡುತ್ತಿರುವ ವಿದ್ಯುತ್ ತಂತಿಗಳು : ಆತಂಕದಲ್ಲಿ ನಾಗರಿಕರು

ಈ ಸುದ್ದಿಯನ್ನು ಶೇರ್ ಮಾಡಿ

power

ಗೌರಿಬಿದನೂರು, ಅ.27- ಬೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷತೆಯಿಂದ ಒಂದಲ್ಲಾ ಒಂದು ರೀತಿಯ ಅವಘಡಗಳು ನಡೆಯುತ್ತಲೇ ಇದ್ದು, ಇದಕ್ಕೆ ಇಂಬುಕೊಡುವಂತೆ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಪಕ್ಕದಲ್ಲಿನ ವಿದ್ಯುತ್ ತಂತಿಗಳು ಉಯ್ಯಾಲೆಯಂತೆ ಜೂತು ಬಿದ್ದು ಗಾಳಿಗೆ ಅಗಾಗ್ಗೆ ತಂತಿಗಳು ಒಂದೊಕ್ಕೊಂದು ತಗುಲಿಕೊಂಡು ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಈ ಭಾಗದ ನಾಗರಿಕರು ಹಾಗೂ ವಾಹನ ಸವಾರರು ಆತಂಕದಿಂದ ಓಡಾಡುವಂತಾಗಿದೆ.ಪಟ್ಟಣದ ಸಾರಿಗೆ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಸಮೀಪದಲ್ಲಿರುವ ಉತ್ತರ ಪಿನಾಕಿನಿ ನದಿಯ ಸೇತುವೆ ಪಕ್ಕದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದು, ತಂತಿಗಳು ಸಡಿಲಗೊಂಡು ಜೋತಾಡುತ್ತಿವೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ತಿರುಪತಿ ಮುಂತಾದವ ಕಡೆಗಳಿಗೆ ತೆರಳುವ ಸಾರಿಗೆ ಮತ್ತು ಖಾಸಗಿ ಬಸ್‍ಗಳು ಇದೇ ರಸ್ತೆಯಲ್ಲೇ ಓಡಾಡಬೇಕಿದೆ.

ಅತಿ ಹೆಚ್ಚು ವಾಹನ ಸಂಚಾರವಿರುವ ಈ ರಸ್ತೆ ಪಕ್ಕದಲ್ಲೇ ಸುಮಂಲಿ, ಸದಾಶಿವ, ವಿಜ್ಞೇಶ್ವರ  ಬಡಾವಣೆಗಳು, ಹಿರೇಬಿದನೂರು ಗ್ರಾಮದ ಹಾಗೂ ಸುತ್ತು ಮುತ್ತಲ ಗ್ರಾಮದವರು ಇದೇ ರಸ್ತೆಯಲ್ಲೇ ಪಟ್ಟಣಕ್ಕೆ ಬರಬೇಕಿದೆ. ವಾಹನ ಸಂಚಾರ ದಟ್ಟಣೆಯಿರುವ ಸ್ಥಳದಲ್ಲಿ ಸೇತುವೆ ಕಿರದಾಗಿದ್ದು, ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ರಸ್ತೆಯ ಬದಿಯಲ್ಲೇ ಸಂಚರಿಸಬೇಕಿದೆ.ವಿದ್ಯುತ್ ತಂತಿಗಳು ವಾಲಿರುವುದರಿಂದ, ಜೋರಾಗಿ ಗಾಳಿ ಬೀಸಿದಲ್ಲಿ ಎಲ್ಲಿ ಮುರಿದು ಬೀಳುತ್ತದೋ ಎಂಬ ಆತಂಕದಿಂದ ಪಾದಚಾರಿಗಳು ಓಡಾಡುವಂತಾಗಿದೆ. ಜತೆಗೆ ರಾತ್ರಿ ವೇಳೆ ಈ ಭಾಗದಲ್ಲಿ ಬೀದಿ ದೀಪಗಳು ಕೆಟ್ಟುಹೋಗಿದ್ದು, ಯಾವಾಗ ಏನು ಆಗುತ್ತದೋ ಎಂಬ ಭೀತಿರಯಲ್ಲಿ ನಾಗರಿಕರು ಕಾಲ ಕಳೆಯುವಂತಾಗಿದೆ. ಈ ಬಗ್ಗೆ ಬೆಸ್ಕಾಂ ಇಲಾಖೆಯವರು ಇತ್ತಕಡೆ ಗಮನ ಹರಿಸಿ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಇಲ್ಲಿನ ನಾಗರಿಕರು ಮನವಿ ಮಾಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin