ವಿಟ್ರಾಗ್ ಜ್ಯುವೆಲ್ಸ್ ಅಂಗಡಿಯ ಚಿನ್ನಾಭರಣ ದೋಚಿದ್ದ 5 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಬೆಂಗಳೂರು,ಅ.28- ಜಯನಗರದಲ್ಲಿ ನಡೆದಿದ್ದ ವಿಟ್ರಾಗ್ ಜ್ಯುವೆಲ್ಸ್ ಅಂಗಡಿಯ ಕೆಲಸಗಾರರಿಂದ ಚಿನ್ನಾಭರಣ ಸುಲಿಗೆ ಮಾಡಿದ್ದ ಐದು ಮಂದಿ ಆರೋಪಿಗಳನ್ನು ತಿಲಕ್‍ನಗರ ಪೊಲೀಸರು ಬಂಧಿಸಿ 31 ಲಕ್ಷ ರೂ. ಮೌಲ್ಯದ ವಜ್ರ ಮತ್ತು ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.  ವಿಟ್ರಾಗ್ ಜ್ಯುವೆಲ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ (25), ಸಹಚರರಾದ ಸಂತೋಷ್ (25), ಕಿಶನ್‍ಪ್ರಸಾದ್ (22), ದಿವಾಕರ್ (25) ಮತ್ತು ಸರವಣ (30) ಬಂಧಿತ ಸುಲಿಗೆಕೋರರು.ವಿಟ್ರಾಗ್ ಜ್ಯುವೆಲ್ಸ್‍ನ ಸೇಲ್ಸ್ ಎಕ್ಸಿಕ್ಯುಟಿವ್ ಕುಮಾರ್ ಎಂಬುವರು ಕೆಲಸಗಾರ ರವೀಂದರ್ ಜತೆ ಮೇ 11ರಂದು ಮಧ್ಯಾಹ್ನ 2.50ರಲ್ಲಿ ಜ್ಯುವೆಲರಿ ಅಂಗಡಿಗೆ ಸೇರಿದ 10 ಲಕ್ಷ ರೂ. ಹಣ ಹಾಗೂ ಚಿನ್ನದ ಒಡವೆಗಳನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬೈಕ್‍ನಲ್ಲಿ ಜಯನಗರ 3ನೆ ಬ್ಲಾಕ್‍ನ ಸ್ವಿಮ್ಮಿಂಗ್‍ಫೂಲ್ ಕಡೆಯಿಂದ ಕಿತ್ತೂರುರಾಣಿ ಚೆನ್ನಮ್ಮ ಮೈದಾನದ ಗೇಟ್ ಬಳಿಯ ಭೈರಸಂದ್ರದ ರಸ್ತೆಯಲ್ಲಿ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಇವರನ್ನು ಹಿಂಬಾಲಿಸಿ ಬಂದು ಏಕಾಏಕಿ ರವೀಂದರ್ ಅವರನ್ನು ಬೈಕ್‍ನಿಂದ ಹಿಡಿದು ಎಳೆದಿದ್ದಾರೆ. ಈ ವೇಳೆ ಇಬ್ಬರೂ ಬೈಕ್‍ನಿಂದ ಕೆಳಗೆ ಬಿದ್ದಾಗ ರವೀಂದರ್ ಹಿಡಿದುಕೊಂಡಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ಕಿತ್ತುಕೊಂಡು ಬೈಕ್‍ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ವಿಟ್ರಾಗ್ ಜ್ಯುವೆಲ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ ಎಂಬಾತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸುಲಿಗೆ ಮಾಡಿದ್ದ ಆಭರಣಗಳನ್ನು ಸರವಣ ಎಂಬುವನಿಗೆ ನೀಡಿದ್ದು, ಪೊಲೀಸರಿಗೆ ಹೆದರಿದ ಆರೋಪಿ ರಂಜಿತ್‍ಕುಮಾರ್ ತನ್ನ ಸಹಚರರಿಗೆ ಸುಲಿಗೆ ಮಾಡಿದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಾಪಸ್ ಜ್ಯುವೆಲ್ಸ್ ಅಂಗಡಿಗೆ ತಲುಪಿಸಬೇಕೆಂದು ತಿಳಿಸಿದಾಗ, ಸರವಣ ಈ ಆಭರಣಗಳನ್ನು ಹೋಲುವ ನಕಲಿ ಒಡವೆಗಳನ್ನು ತಂದು ಯಾರಿಗೂ ತಿಳಿಯದಂತೆ ವಿಟ್ರಾಗ್ ಜ್ಯುವೆಲ್ಸ್ ಬಳಿ ಬಿಸಾಡಿದ್ದನು.

ಸುಲಿಗೆ ಮಾಡಿದ್ದ ಆಭರಣಗಳನ್ನು ರೋಷನ್, ಸೋನಿ ಎಂಬಾತನ ಮೂಲಕ ರಾಜಸ್ಥಾನದ ಪಂಕಜ್ ಸೋನಿ ಎಂಬುವನಿಗೆ ನೀಡಿ ಮುಂಬೈ ನಗರದಲ್ಲಿ ವಜ್ರ ಮತ್ತು ಚಿನ್ನದ ಆಭರಣಗಳನ್ನು ಮಾರಾಟ ಮಾಡಿಸಿದ್ದುದು ತೀವ್ರ ವಿಚಾರಣೆಯಿಂದ ತಿಳಿದುಬಂದಿದೆ.ಆರೋಪಿಗಳಿಂದ 4 ಲಕ್ಷ ರೂ. ನಗದು, 50 ಗ್ರಾಂ ತೂಕದ ಚಿನ್ನ ಮತ್ತು ಡೈಮಂಡ್ ವಾಚ್, 35 ಗ್ರಾಂನ ಚಿನ್ನ ಮತ್ತು ಡೈಮಂಡ್ ನೆಕ್ಲೇಸ್ ಸೇರಿದಂತೆ 25 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಡೈಮಂಡ್ ಆಭರಣಗಳು, 3 ಬೈಕ್ ವಶಪಡಿಸಿಕೊಂಡಿದ್ದಾರೆ. ತಿಲಕ್‍ನಗರ ಇನ್ಸ್‍ಪೆಕ್ಟರ್ ತನ್ವೀರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin