ಸೈನಿಕರ ಜೊತೆ ಯಡಿಯೂರಪ್ಪ ದೀಪಾವಳಿ ಆಚರಣೆ : ಮನೆಗೊಬ್ಬರು ಸೈನ್ಯಕ್ಕೆ ಸೇರುವಂತೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01
ಬೆಂಗಳೂರು, ಅ.30 – ದೇಶ ರಕ್ಷಣೆ ಮಾಡಲು ಪ್ರತಿಯೊಂದು ಕುಟುಂಬದ ಒಬ್ಬೊಬ್ಬ ಸದಸ್ಯರು ಸೈನ್ಯಕ್ಕೆ ಸೇರ್ಪಡೆಯಾಗಲು ಯುವಜನತೆ ಪಣ ತೊಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಯಲಹಂಕದ ಬಿಎಸ್‍ಎಫ್ ಹಾಗೂ ಎಸ್‍ಟಿಎಫ್ ಶಿಬಿರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಅವರು ಮಾತನಾಡಿದರು.  ರಾಷ್ಟ್ರದ ಪ್ರತಿಯೊಂದು ಕುಟುಂಬದಿಂದ ಒಬ್ಬೊಬ್ಬರು ಸೇನೆಗೆ ಸೇರ್ಪಡೆಯಾಗಲು ಮುಂದಾದರೆ ದೇಶದ ಮೇಲೆ ಯಾರೊಬ್ಬರು ದಾಳಿ ಮಾಡಲು ಸಾಧ್ಯವಿಲ್ಲ. ಸೈನಿಕರು ದೇಶದ ಆಸ್ತಿ ಎಂದು ಪ್ರಶಂಸಿಸಿದರು.

ನಮ್ಮ ಮನೆಯಲ್ಲಿ ಕುಳಿತು ಕುಟುಂಬದ ಸದಸ್ಯರ ಜೊತೆ ದೀಪಾವಳಿ ಹಬ್ಬ ಆಚರಿಸಿದರೆ ಅರ್ಥ ಬರುವುದಿಲ್ಲ. ರಾಷ್ಟ್ರ ರಕ್ಷಣೆಗಾಗಿ ತಂದೆತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಸೇರಿದಂತೆ ಕುಟುಂಬ ವರ್ಗದವರನ್ನು ಬಿಟ್ಟು ಸೈನಿಕರು ದೇಶ ಸೇವೆ ಮಾಡುತ್ತಾರೆ. ಇಂತಹ ವೇಳೆ ನಾವ ಏಕಾಂಗಿ ಎಂಬ ಕೊರಗು ಅವರಿಗೆ ಬರಬಾರದು.
ಪ್ರತಿ ವರ್ಷ ಪ್ರಧಾನಿಯವರು ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಣೆ ಮಾಡುತ್ತಿದ್ದಾರೆ. ಅವರ ಕೋರಿಕೆಯಂತೆ ನಾವು ಕೂಡ ಹಬ್ಬ ಆಚರಣೆ ಮಾಡುತ್ತಿರುವುದು ನಿಜಕ್ಕೂ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Yadiyurappa-02

ಯುದ್ಧ ರಂಗದಲ್ಲಿ ಯೋಧರಿಗೆ ತಮ್ಮ ಕುಟುಂಬದ ಬಗ್ಗೆ ಚಿಂತಿಸುವಂತಾಗಬಾರದು. ಇಡೀ ದೇಶ ನಿಮ್ಮ ಜೊತೆಗೆ ಇರುತ್ತದೆ ಎಂಬ ಆತ್ಮವಿಶ್ವಾಸವನ್ನು ತುಂಬಬೇಕು. ಒಂದು ವೇಳೆ ಅವರು ಆತ್ಮಸ್ಥೈರ್ಯ ಕಳೆದುಕೊಂಡರೆ ದೇಶ ರಕ್ಷಣೆ ಮಾಡುವುದು ಯಾರು ಎಂದು ಪ್ರಶ್ನಿಸಿದರು.  ಯುದ್ಧರಂಗದಲ್ಲಿ ಹೋರಾಡಲು ಕೋವಿಗಳಲ್ಲ. ಕೋವಿಯ ಹಿಂದಿನ ಹೃದಯ. ಅವರೊಂದಿಗೆ ನಾವು ಬೆರೆತು ಸಮಸ್ಯೆಗಳನ್ನು ಕೇಳಬೇಕು. ನಿರಂತರವಾಗಿ ಸಂಪರ್ಕಗಳನ್ನು ಇಟ್ಟುಕೊಂಡರೆ ಸೈನಿಕರಲ್ಲಿ ದೃಢವಿಶ್ವಾಸ ಹೆಚ್ಚಲಿದೆ ಎಂದು ಹೇಳಿದರು.  ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕಾಗಿ ವೀರಪುತ್ರರ ಈ ಸಾಧನೆಯನ್ನು ದೇಶವೇ ಹೆಮ್ಮೆಯಿಂದ ಹಾಡಿ ಹೊಗಳುತ್ತಿದೆ. ಸೈನಿಕ ಕುಟುಂಬ ಯೋಗಕ್ಷೇಮವನ್ನು ನಾಗರಿಕ ಸಮಾಜ ನೋಡಿಕೊಳ್ಳಬೇಕೆಂದರು.

Yadiyurappa-03

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಕಾಶ್ಮೀರ ಪಾಕ್ ಆಕ್ರಮಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗ. ನಮ್ಮ ಪವಿತ್ರ ಭೂಮಿ ಮೇಲೆ ಆಕ್ರಮಣ ಮಾಡಿದ್ದವರ ಮೇಲೆ ಶೌರ್ಯದಿಂದಲೇ ಬಡಿದು ಬುದ್ದಿ ಕಲಿಸಿದ್ದೇವೆ ಎಂದು ಹೇಳಿದರು.  ನಮಗೆ ಇಂದು ದೀಪಾವಳಿಯಾದರೆ ವೀರ ಯೋಧರು ಒಂದು ತಿಂಗಳ ಹಿಂದೆಯೇ ಪಿಒಕೆಯಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡುವ ಮೂಲಕ ದೀಪಾವಳಿ ಆಚರಿಸಿದ್ದಾರೆ. ಸೈನಿಕರ ಈ ಸಾಹಸವನ್ನು ಭಾರತ ಮಾತ್ರವಲ್ಲದೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ನಮ್ಮ ರಾಷ್ಟ್ರ ಸುರಕ್ಷಿತವಾಗಿದೆ ಎಂದರೆ ಅದಕ್ಕೆ ಸೈನಿಕರ ನಿಸ್ವಾರ್ಥ ಸೇವೆಯೇ ಕಾರಣ. ಭಾರತದ ರಕ್ಷ ಕವಚದಂತೆ ರಾಷ್ಟ್ರ ರಕ್ಷಣೆ ಮಾಡುತ್ತಿರುವ ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗಡಿಯ ಸುರಕ್ಷತೆಗಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು , ನುಸುಳುಕೋರರನ್ನು ತಡೆಯಲು ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಜನತೆಯ ಪರವಾಗಿ ಹೆಮ್ಮೆಯ ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅನಂತಕುಮಾರ್ ನುಡಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಸೈನಿಕರಿಗೆಲ್ಲ ಸಿಹಿ ಹಂಚಿ ಸಂಭ್ರಮಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin