ದೆಹಲಿಯಲ್ಲಿ ತಪ್ಪಿದ ಘೋರ ಅಗ್ನಿ ದುರಂತ : ಸಿನಿಮಿಯ ರೀತಿಯಲ್ಲಿ 27 ಮಂದಿ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ
Fire-0
ಸಾಂಧರ್ಭಿಕ ಚಿತ್ರ

ನವದೆಹಲಿ, ನ.1- ಪೊಲೀಸರ ಸಮಯ ಪ್ರಜ್ಞೆ ಮತ್ತು ಸ್ಥಳೀಯರ ಸಕಾಲಿಕ ನೆರವಿನಿಂದ ರಾಜಧಾನಿಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸಂಭವಿಸಬಹುದಾಗಿದ್ದ ಘೋರ ಅಗ್ನಿ ದುರಂತವೊಂದು ತಪ್ಪಿದ್ದು, 27 ಮಂದಿ ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.  ದೆಹಲಿಯ ಅಮರ್ ಕಾಲೋನಿಯ ಪೇಯಿಂಗ್ ಗೇಸ್ಟ್ ಹಾಸ್ಟೆಲ್ನ ನೆಲ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಎರಡು ಅಂತಸ್ತುಗಳ ಇಡೀ ಕಟ್ಟಡವನ್ನು ಆವರಿಸಿಕೊಂಡಿತು. ಅಗ್ನಿ ಜ್ವಾಲೆಗಳು ಪ್ರವೇಶ ದ್ವಾರವನ್ನು ಆಕ್ರಮಿಸಿಕೊಂಡಿದ್ದರಿಂದ ಹಾಗೂ ದಟ್ಟ ಹೊಗೆ ಆವರಿಕೊಂಡಿದ್ದರಿಂದ ಕಂಗಾಲಾದ ಪಿಜಿ ಹಾಸ್ಟೆಲ್ನ 23 ಮಹಿಳೆಯರು ಮತ್ತು ನಾಲ್ವರು ವಾರ್ಡನ್ಗಳು ಬಾಲ್ಕನಿಗೆ ತೆರಳಿ ಸಹಾಯಕ್ಕಾಗಿ ಕೂಗಿಕೊಂಡರು.

ದೀಪಾವಳಿ ಸಂದರ್ಭದಲ್ಲಿ ಸೂಕ್ಷ್ಮಪ್ರದೇಶಗಳಲ್ಲಿ ನಿಯೋಜಿತಗೊಂಡಿದ್ದ ಪೊಲೀಸರು ತಕ್ಷಣ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಆದರೆ ಬೆಂಕಿಯ ಕೆನ್ನಾಲಿಗೆ ಉಗ್ರ ಸ್ವರೂಪ ಪಡೆದುಕೊಂಡು ಹಾಸ್ಟೆಲ್ ವಾಸಿಗಳು ಸಾವಿಗೆ ಸನಿಹವಾಗುತ್ತಿದುದನ್ನು ಗಮನಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಎರಡು ಏಣಿಗಳ ಮೂಲಕ ಬಾಲ್ಕನಿ ಏರಿ ತಡಮಾಡದೇ ಎಲ್ಲರನ್ನೂ ಕೆಳಗೆ ಇಳಿಸಿದರು. ಅಷ್ಟು ಹೊತ್ತಿಗಾಗಲೇ ಬೆಂಕಿಯ ಜ್ವಾಲೆಗಳು ಇಡೀ ಕಟ್ಟಡವನ್ನು ಆವರಿಸಿದ್ದವು.  ನಂತರ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತಂದರು ಎಂದು ಸಬ್-ಇನ್ಸ್ಪೆಕ್ಟರ್ ಕಮಲ್ ತಿಳಿಸಿದ್ದಾರೆ.

ಬೆಂಕಿ ಮತ್ತು ಹೊಗೆಯ ತೀವ್ರತೆಯಿಂದ ನಾವು ಹೊರಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ನಾವೆಲ್ಲ ಹೆದರಿ ಕಂಗಾಲಾಗಿದ್ದೇವು. ಪೊಲೀಸರು ನಮ್ಮನ್ನೆಲ್ಲ ರಕ್ಷಿಸಿದರು ಎಂದು ಹಾಸ್ಟೆಲ್ ನಿವಾಸಿ ಕವಿತಾ ಹೇಳಿದ್ದಾರೆ. ಬೆಂಕಿಗಾಹುತಿಯಾದ ಕಟ್ಟಡದಲ್ಲಿ ಒಟ್ಟು 35 ಮಂದಿ ಉದ್ಯೋಗಸ್ಥ ಮಹಿಳೆಯರಿದ್ದು, ಕೆಲವರು ದೀಪಾವಳಿ ಪ್ರಯುಕ್ತ ತಮ್ಮ ಊರುಗಳಿಗೆ ಹೋಗಿದ್ದಾರೆ.
ಈ ಪ್ರದೇಶದಲ್ಲಿ 10ಕ್ಕಿಂತ ಹೆಚ್ಚು ಪೇಯಿಂಗ್ ಗೇಸ್ಟ್ ಹಾಸ್ಟೆಲ್ಗಳಿವೆ. ಅಗ್ನಿ ಸುರಕ್ಷತೆ ಪಾಲಿಸದ ಕಾರಣ ಈ ಕಟ್ಟಡಗಳು ದೀಪಾವಳಿ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕಕ್ಕೆ ಒಳಗಾಗುವುದು ಸಾಮಾನ್ಯ ಸಂಗತಿಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin