ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ : ಪ್ರಧಾನಿ ಮಧ್ಯೆಪ್ರವೆಶಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಸಿಎಂ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

CM-06

ಬೆಂಗಳೂರು, ನ.1- ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮಧ್ಯಪ್ರವೇಶಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಒತ್ತಾಯಿಸಿದರು. ನಗರದ ಕಂಠೀರವ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ-2016ರ ಕನ್ನಡ ನಾಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ 1994ರಲ್ಲೇ ಕನ್ನಡ ಭಾಷಾ ಮಾಧ್ಯಮ ನೀತಿಯನ್ನು ಜಾರಿಗೊಳಿಸಿದೆ. ಇದರಂತೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು ಎಂಬುದು ಸರ್ಕಾರದ ನಿಲುವು. ಆದರೆ, ಅನುದಾನ ರಹಿತ ಶಾಲೆಗಳು ಇದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿವೆ.

CM-01

ಕಾನೂನು ಹೋರಾಟದಲ್ಲಿ ನಮಗೆ ಹಿನ್ನಡೆಯಾಗಿದೆ. 2014ರಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಭಾಷಾ ಮಾಧ್ಯಮ ಪೋಷಕರ ಆಯ್ಕೆ ಯಾಗಿರಬೇಕೆಂದು ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ನಾವು ಮೇಲ್ಮನವಿ ಸಲ್ಲಿಸಿದರೂ ಜಯ ಸಿಕ್ಕಿಲ್ಲ.  ಅನಂತರ ನಾನು ಪ್ರಧಾನಮಂತ್ರಿಯವರಿಗೆ ಎರಡು ಪತ್ರ ಬರೆದಿದ್ದೇನೆ. ಎಲ್ಲಾ ರಾಜ್ಯಗಳ ಮು ಖ್ಯಮಂತ್ರಿಗಳಿಗೂ ಪತ್ರ ಬರೆದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರ ಮೇಲೆ ಒತ್ತಡ ಹೇರುವಂತೆ ಸಲಹೆ ನೀಡಿದ್ದೇನೆ ಎಂದರು. ಸುಪ್ರೀಂಕೋರ್ಟ್ ತೀರ್ಪನ್ನು ಬದಲಾವಣೆ ಮಾಡಲು ಸಂವಿಧಾನದ ತಿದ್ದುಪಡಿ ಅನಿವಾರ್ಯವಾಗಿದೆ. ಪ್ರಧಾನಮಂತ್ರಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನ್ನು ಕರೆದು ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಭಾಷಾ ಮಾಧ್ಯಮ ಪ್ರಾದೇಶಿಕ ಭಾಷೆಯಲ್ಲೇ ನಡೆಯಬೇಕು. ಇಲ್ಲವಾದರೆ ಪ್ರಾಂತೀಯ ಭಾಷೆಗಳಿಗೆ ಧಕ್ಕೆಯಾಗಲಿದೆ ಎಂದು ಎಲ್ಲಾ ಶಿಕ್ಷಣ ಹಾಗೂ ಭಾಷಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಒತ್ತಾಸೆಯೂ ಆಗಿದೆ. ನಾನು ಮೊದಲಿನಿಂದಲೂ ಪ್ರಾಂತೀಯ ಭಾಷೆಯಲ್ಲೇ ಶಿಕ್ಷಣ ಮಾಧ್ಯಮ ನಡೆಯಬೇಕೆಂದು ಒತ್ತಾಯಿಸಿದ್ದೆನೆ. ಇಂದೂ ಕೂಡ ಒತ್ತಾಯಿಸುತ್ತೇನೆ ಎಂದರು.

CM-02

ವಜ್ರ ಮಹೋತ್ಸವ:

ಭಾಷೆ ಆಧಾರದ ಮೇಲೆ ಕರ್ನಾಟಕ ಏಕೀಕರಣಗೊಂಡು 61 ವರ್ಷಗಳಾಗಿವೆ. 1947ರಲ್ಲಿ ಸ್ವತಂತ್ರ ಬಂದರೂ ಭಾಷೆಯ ಆಧಾರದ ಮೇಲೆ ಏಕೀಕರಣಗೊಂಡಿದ್ದು, 1956ರ ನ.1ರಂದು. ಇದಕ್ಕಾಗಿ ಅನೇಕ ಗಣ್ಯರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಏಕೀಕರಣದ ನಂತರ ರಾಜ್ಯದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಿದೆ. ಏಕೀಕರಣಕ್ಕೆ ಹೋರಾಡಿದವರ ಕನಸು ನನಸು ಮಾಡುವುದು ನಮ್ಮ ಕರ್ತವ್ಯ. ಕನ್ನಡ, ನೆಲ, ಜಲ, ಭಾಷೆಗಾಗಿ ನಿರಂತರವಾಗಿ ಹೋರಾಡುತ್ತೇನೆ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು ಮತ್ತು ಈವರೆಗಿನ ನಮ್ಮ ಹೋರಾಟಗಳ ಆತ್ಮಾವಲೋಕನ ಮಾಡಿಕೊಳ್ಳಬೇಕು. ನ.1ರಂದು ಮಾತ್ರ ಅಭಿಮಾನ ಬದ್ಧತೆ ತೋರಿಸಿದರೆ ಸಾಲದು, ನಾಡು, ನುಡಿ, ಸಂಸ್ಕøತಿಯ ರಕ್ಷಣೆಗಾಗಿ ವರ್ಷಪೂರ್ತಿ ಬದ್ಧವಾಗಿರುವ ಸಂಕಲ್ಪ ಮಾಡಬೇಕು ಎಂದು ಸಿಎಂ ಕರೆ ನೀಡಿದರು.

CM-07

ರಾಜ್ಯ ಸರ್ಕಾರ ಈ ವರ್ಷ ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ನಮ್ಮ ಸರ್ಕಾರ ಕಾವೇರಿ ವಿಷಯದಲ್ಲಿ ನಾಡಿನ ಹಿತರಕ್ಷಣೆಗೆ ಬದ್ಧವಾಗಿ ಕೆಲಸ ಮಾಡಬೇಕು ಅಧಿಕಾರ ಶಾಶ್ವತವಲ್ಲ. ನೆಲ, ಜಲ, ಭಾಷೆ, ಸಂಸ್ಕøತಿ ವಿಷಯ ಬಂದಾಗ ಅಧಿಕಾರವನ್ನೂ ಪಣಕ್ಕಿಡಬೇಕಾಗುತ್ತದೆ. ಕಾವೇರಿ ವಿಷಯದಲ್ಲಿ ನಾವು ಆ ಬದ್ಧತೆತಿಯಿಂದ ನಡೆದುಕೊಂಡಿದ್ದೇವೆ. ವಿಶೇಷ ಅಧಿವೇಶನ ಕರೆದು ಕುಡಿಯುವ ನೀರಿಗಲ್ಲದೆ ಬೇರೆ ಉದ್ದೇಶಕ್ಕೆ ಕಾವೇರಿ ನೀರು ಬಿಡುವುದಿಲ್ಲ ಎಂಬ ಒಮ್ಮತದ ನಿರ್ಣಯ ಕೈಗೊಂಡಿದ್ದೆವು. ಅದಕ್ಕೆ ವಿಪಕ್ಷಗಳು ಮತ್ತು ನಾಡಿನ ಜನರು ಸಹಕರಿಸಿದ್ದರು. ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು. ನಾಡಿನ ಹಿತರಕ್ಷಣೆ ಬಂದಾಗ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ. ನಾಡಿಗಾಗಿ ಸಮರ್ಪಣೆ ಮಾಡಿಕೊಳ್ಳಲೂ ಸಿದ್ಧ. ನಾವೆಲ್ಲ ಕನ್ನಡದ ಮಕ್ಕಳು. ನಾಡಿನ ರಕ್ಷಣೆಗೆ ಬದ್ಧರಾಗಿರೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM-03

2015-16ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದೇ ವೇಳೆ ಉಚಿತ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್, ಜ್ಞಾನ ಆಯೋಗದ ಶಿಫಾರಸಿನಂತೆ ಬಡವ, ಶ್ರೀಮಂತ ಎಂಬ ಅಂತರವನ್ನು ಕಡಿಮೆ ಮಾಡುವುದಕ್ಕೆ ಹೊಸ ಶಿಕ್ಷಣ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಓದುವ ಹವ್ಯಾಸವನ್ನು ಹೆಚ್ಚಾಗಿಸಲು ಗ್ರಂಥಾಲಯಗಳಲ್ಲಿ 25 ಸಾವಿರ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿ ಅಂತರ್ಜಾಲಕ್ಕೆ ಅಳವಡಿಸಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆ ಕರೆತರಲಾಗುತ್ತಿದೆ ಎಂದು ಹೇಳಿದರು.

CM-04

ಸಚಿವರಾದ ಕೆ.ಜೆ.ಜಾರ್ಜ್, ರೋಷನ್‍ಬೇಗ್, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಮೇಯರ್ ಪದ್ಮಾವತಿ, ಬಿಬಿಎಂಪಿ ಸದಸ್ಯ ವಸಂತ್‍ಕುಮಾರ್, ಬೆಂ.ನಗರ ಜಿಪಂ ಅಧ್ಯಕ್ಷ ಮುನಿರಾಜು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಅಜಯ್‍ಶೇಟ್, ಎಲ್.ಎ.ಅತಿಖ್, ತುಶಾರ್‍ಗಿರಿನಾಥ್, ಅನುಪಮಾ ಅಗರ್‍ವಾಲ್, ಉಮಾಶಂಕರ್, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‍ರೆಡ್ಡಿ, ಸಾರ್ವಜನಿಕ ಶಿಕ್ಷಣ ಆಯುಕ್ತರಾದ ಸೌಜನ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 110 ಶಾಲೆಯ ಸುಮಾರು 10 ಸಾವಿರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

► Follow us on –  Facebook / Twitter  / Google+

Facebook Comments

Sri Raghav

Admin