5 ವರ್ಷಗಳ ನಂತರ ಬಳ್ಳಾರಿಗೆ ಬಂದ ಗಣಿಧಣಿಗೆ ಅದ್ದೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy

ಬಳ್ಳಾರಿ ನ.01 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಜನಾರ್ದನ ರೆಡ್ಡಿ 5 ವರ್ಷಗಳ ನಂತರ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿದ್ದು, ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ. ಮಗಳ ಮದುವೆಗೆಂದು ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಹೈದರಾಬಾದ್‍ನಿಂದ ಬಳ್ಳಾರಿಗೆ ಆಗಮಿಸಿದ ಜನಾರ್ದನ ರೆಡ್ಡಿ ಕರ್ನೂಲ್ ಬಳಿ ಮಾರ್ಗ ಮಧ್ಯೆ ಸಿಗುವ ತುಂಗಾಭದ್ರಾ ನದಿಗೆ ನಮಸ್ಕರಿಸಿ ಬಳ್ಳಾರಿಗೆ ಆಗಮಿಸಿದರು.

ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಗ್ರಾಮಕ್ಕೆ ತೆರೆದ ಜೀಪಿನಲ್ಲಿ ಜನಾರ್ದನ ರೆಡ್ಡಿ ಆಗಮಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಹಾರ, ತುರಾಯಿ ಹಾಕಿ ಸ್ವಾಗತಿಸಿದರು.  ರೆಡ್ಡಿ  ಆಗಮನ ಹಿನ್ನೆಲೆಯಲ್ಲಿ ಇಲ್ಲಿನ ರಾಯಲ್ ವೃತ್ತದಲ್ಲಿ ಅಭಿಮಾನಿಗಳು ಬಿಯರ್ ಚಿಮ್ಮಿಸಿ, ಕುಡಿದು ಸಂತಸ ವ್ಯಕ್ತಪಡಿಸಿದರು. ರೆಡ್ಡಿ ಅವರ ಬುರುವಿಕೆಗಾಗಿ ಸಂಜೆ 4ರಿಂದಲೇ ಜನ ಕಾಯುತ್ತಿದ್ದರು. ರೆಡ್ಡಿ ಅವರ ಆಗಮನ ಅಂಗವಾಗಿ ಬಳ್ಳಾರಿಯ ರಾಯಲ್ ವೃತ್ತದಲ್ಲಿ ಕಿಕ್ಕಿರಿದ ಜನಸಂದಣಿ ಇದ್ದು, ಜನರನ್ನು ನಿಯಂತ್ರಿಸುವಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಹರಸಾಹಸ ಪಟ್ಟರು.

ಸುರೇಶ್ ಬಾಬು, ಸೋಮಶೇಖರ ರೆಡ್ಡಿ ಸೇರಿ ಬೆಂಬಲಿಗರು ರೆಡ್ಡಿಗೆ ಭವ್ಯ ಸ್ವಾಗತ ನೀಡಿದರು. ಆದರೆ, ಕಿಲೋ ಮೀಟರ್ ಗಟ್ಟಲೇ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕರಿಂದ ಸ್ವಯಂಪ್ರೇರಿತ ದೂರು ದಾಖಲಾದ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೇ ಮೆರವಣಿಗೆ ನಡೆಸಿದ್ದಕ್ಕೆ ಜನಾರ್ದನ ರೆಡ್ಡಿ ಮೇಲೆ ಕೇಸ್ ದಾಖಲಾಗಿದೆ ಎಂದು ಬಳ್ಳಾರಿ ಎಸ್‍ಪಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin