ಕರಾಳ ದಿನಾಚರಣೆಯಲ್ಲಿ ಕಾಣಿಸಿಕೊಂಡ ಬೆಳಗಾವಿ ಮೇಯರ್-ಉಪಮೇರ್ ಬಗ್ಗೆ ವರದಿ ಕೇಳಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Mayor

ಬೆಂಗಳೂರು,ನ.2-ಬೆಳಗಾವಿಯಲ್ಲಿ ನಿನ್ನೆ ನಡೆದ ಎಂಇಎಸ್‍ನ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮೇಯರ್, ಉಪಮೇಯರ್ ಬಗ್ಗೆ ಜಿಲ್ಲಾಡಳಿತದಿಂದ ಸರ್ಕಾರ ವರದಿ ಕೇಳಿದೆ.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಹಾಗೂ ಸೈಕಲ್ ಜಾಥಾ ಆಯೋಜಿಸಿತ್ತು. ಬೆಳಗಾವಿ ಮೇಯರ್ ಸರಿತಾ ಪಾಟೀಲ, ಉಪಮೇಯರ್ ಸಂಜಯ ಶಿಂಧೆ ರಾಜ್ಯೋತ್ಸವ ವನ್ನು ಧಿಕ್ಕಿರಿಸಿ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.  ಈ ಸಂಬಂಧ ರಾಜ್ಯ ಸರ್ಕಾರ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ವಿಧಾನಸೌಧದಲ್ಲಿ ಕರಾಳ ದಿನಾಚರಣೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ರಾಮಯ್ಯ, ವರದಿ ಕೇಳಿದ್ದೇವೆ ಎಂದು ಚುಟುಕಾಗಿ ಹೇಳಿ, ಜಿಲ್ಲಾಡಳಿತದಿಂದ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕರಾಳ ದಿನಾಚರಣೆ ಸರಿಯಲ್ಲ:ಟಿ.ಬಿ.ಜಯಚಂದ್ರ

ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನವಾದ ನಿನ್ನೆ ಎಂಇಎಸ್‍ನವರು ಕರಾಳ ದಿನಾಚರಣೆ ಆಚರಿಸಿರುವುದು ಸರಿಯಲ್ಲ. ಸರ್ಕಾರದ ಪ್ರತಿನಿಧಿಗಳಾದ ಮೇಯರ್, ಉಪಮೇಯರ್ ಪಾಲ್ಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಇದೇ ವೇಳೆ ಟಿ.ಬಿ.ಜಯಚಂದ್ರ ತಿಳಿಸಿದರು.  ಇಬ್ಬರೂ ಸರ್ಕಾರದ ಪ್ರತಿನಿಧಿಗಳು, ಹಾಗಿದ್ದರೂ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು ಸರಿಯಲ್ಲ. ಮುಂದೆ ಯಾವ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಬೆಳಗಾವಿ ಜಿಲ್ಲಾಡಳಿತದಿಂದ ವರದಿ ಬಂದ ನಂತರ ತೀರ್ಮಾನಿಸುವುದಾಗಿ ಹೇಳಿದರು.  ಹಿಂದೆ ಇಂತಹ ಘಟನೆಗಳು ನಡೆದಾಗ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಾಗಿತ್ತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಇಂತಹ ಕ್ರಮಗಳನ್ನು ಕೈಗೊಂಡ ನಿದರ್ಶನಗಳಿವೆ. ರಾಜ್ಯೋತ್ಸವ ದಿನದಂದೇ ಎಂಇಎಸ್ ಆಚರಿಸಿದ ಕರಾಳ ದಿನಾಚರಣೆಯಲ್ಲಿ ಮೇಯರ್, ಉಪಮೇಯರ್ ಪಾಲ್ಗೊಂಡಿರುವುದು ಮಾಧ್ಯಮಗಳ ಮೂಲಕ ತಿಳಿದಿದೆ. ಜಿಲ್ಲಾಡಳಿತ ವರದಿ ನೀಡಿದ ಮೇಲೆ ಇಬ್ಬರ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin