ಮೈಸೂರಲ್ಲಿ ಕೇಂದ್ರ ಬರ ಅಧ್ಯಯನ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Mysuru-003

ಮೈಸೂರು, ನ.4- ಕೇಂದ್ರದಿಂದ ಜಿಲ್ಲೆಗೆ ಆಗಮಿಸಿರುವ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಡಿಸಿ ರಂದೀಪ್ ಅವರು ಅಂಕಿ-ಅಂಶಗಳ ಸಮೇತ ಕಂಪ್ಯೂಟರ್‍ನಲ್ಲಿ ವಿವಿಧ ಮಾಹಿತಿಗಳನ್ನು ಒದಗಿಸಿದರು. ಜಿಲ್ಲೆಯಾದ್ಯಂತ ಇಂದಿನಿಂದ ಈ ತಂಡ ಅಧ್ಯಯನ ನಡೆಸಲಿದ್ದು, ಇವರಿಗೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿನ ವಾರ್ಷಿಕ ಸರಾಸರಿ ಮಳೆ ಹಾಗೂ ಈ ಬಾರಿ ಸುರಿದ ಮಳೆಯ ಪ್ರಮಾಣ, ಬೆಳೆದ ಬೆಳೆಗಳು, ಅದರಲ್ಲಿ ಉಂಟಾದ ನಷ್ಟ, ಕೈಗೆ ಸಿಕ್ಕ ಬೆಳೆಗಳು, ಲಭ್ಯವಿರುವ ನೀರಿನ ಪ್ರಮಾಣ ಇನ್ನಿತರೆ ಎಲ್ಲಾ ಮಾಹಿತಿಗಳನ್ನು ಪಿಪಿಟಿ ದಾಖಲೆ ಮೂಲಕ ವಿವವರಿಸಲಾಯಿತು.

ಬೆಂಗಳೂರಿನ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ವಾಸುದೇವ ನೇತೃತ್ವದಲ್ಲಿ ಆಗಮಿಸಿದ್ದ ನಾಲ್ವರ ತಂಡದಲ್ಲಿ ಹೈದರಾಬಾದ್‍ನ ಆಯಿಲ್ ಸೀಡ್ಸ್ ನಿರ್ದೇಶಕ ಎಸ್.ಎಸ್.ಕೊಲ್ಹಟ್ಕರ್, ದೆಹಲಿಯ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಸತೀಶ್‍ಕುಮಾರ್ ಕಾಂಬೋಜ್, ದೆಹಲಿಯ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನೀತಾ ತೆಹಲಿಯಾನಿ ಇದ್ದರು.
ಈ ತಂಡ ಇಂದಿನಿಂದ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಲಿದ್ದು, ಜತೆಗೆ ಆಯಾ ಪ್ರದೇಶದಲ್ಲಿ ಮಳೆಯ ಪ್ರಮಾಣ, ಬೆಳೆ ನಷ್ಟದಲ್ಲಿ ಹಿಂದಿನ ಸರಾಸರಿಗೂ ಈಗಿನ ಸರಾಸರಿಗೂ ಆಗಿರುವ ವ್ಯತ್ಯಾಸ ಒಳಗೊಂಡಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಿದೆ.

ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗೆ ಈ ಬಾರಿ ಬಿದ್ದಿರುವ ಮಳೆ ಪ್ರಮಾಣ, ಅದರಲ್ಲಿ ಸಂಗ್ರಹಿತವಾದ ನೀರು, ಬಳಕೆಯಾದ ನೀರು, ಅದನ್ನು ಬಳಸಿ ಬೆಳೆದ ಬೆಳೆಗಳು, ಇನ್ನಿತರೆ ಅತಿ ಮಹತ್ವದ ವಿಚಾರಗಳನ್ನು ಪರಿಶೀಲಿಸಲಿದೆ. ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ತೆರಳಿದ ತಂಡ ಮೊದಲಿಗೆ ಕಲ್ಲಹಳ್ಳಿಯಲ್ಲಿ ಬರ ಅಧ್ಯಯನ ನಡೆಸಿತು. ಅಲ್ಲಿಂದ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣಗಳಲ್ಲಿ ಅಧ್ಯಯನದ ನಂತರ ಹಾಸನಕ್ಕೆ ತಂಡ ತೆರಳಲಿದೆ. ನಗರದ ಹೊರವಲಯದ ಜಯಪುರಕ್ಕೆ ತಂಡ ಭೇಟಿ ನೀಡಿದ ವೇಳೆ ಶಾಸಕ ಜಿ.ಟಿ.ದೇವೇಗೌಡ ಹಾಗೂ ಜಿಲ್ಲಾಧಿಕಾರಿ ರಂದೀಪ್, ಈ ಪ್ರದೇಶದ ರೈತರ ಸಮಸ್ಯೆಯನ್ನು ಬಿಡಿಸಿಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಜಿಲ್ಲೆಯ ಬರದ ಸ್ಥಿತಿ ಕೇಂದ್ರ ತಂಡದ ಗಮನಕ್ಕೆ ಬಂದಿದೆ. ಮಳೆ ಕಡಿಮೆಯಾಗಿರುವುದರಿಂದ ಯಾವುದೇ ಬೆಳೆ ಕೈಗೆ ಬಂದಿಲ್ಲ. ಜಯಪುರದಲ್ಲಿ ಎಲ್ಲ ರೈತರು ಮಳೆಯಾಶ್ರಿತರಾಗಿದ್ದಾರೆ. ಹಾಗಾಗಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಹೇಳಿದರು. ಜಲಾಶಯಗಳು ಬರಿದಾಗಿರುವುದರಿಂದ ನಾಲೆಗಳಲ್ಲೂ ನೀರಿಲ್ಲ. ರೈತರು ಹಾಗೂ ಜಾನುವರುಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದರ ಬಗ್ಗೆ ತಂಡಕ್ಕೆ ವಿವರಿಸಿದ್ದೇವೆ. ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಂಡ ವರದಿ ಸಿದ್ದಪಡಿಸುತ್ತದೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ರಂದೀಪ್ ಮಾತನಾಡಿ, ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ತಂಡಕ್ಕೆ ವಿವರಿಸಿದ್ದೇವೆ. ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ತೋರಿಸಲು ತಂಡವನ್ನು ಕರೆದೊಯ್ದು ಮನದಟ್ಟು ಮಾಡುತ್ತೇವೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin