ಸಿಮಿ ಉಗ್ರರ ಎನ್‍ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ ಶಿವರಾಜ್ ಸಿಂಗ್ ಚವಾಣ್

ಈ ಸುದ್ದಿಯನ್ನು ಶೇರ್ ಮಾಡಿ

SIMI--encounter

ಭೋಪಾಲ್, ನ.4-ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಯ ಉಗ್ರರು ಭೂಪಾಲ್ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡ ಹಾಗೂ ಆನಂತರ ಎನ್‍ಕೌಂಟರ್‍ನಲ್ಲಿ ಹತರಾದ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಆದೇಶ ನೀಡಿದ್ದಾರೆ.  ಮಧ್ಯಪ್ರದೇಶ ಹೈಕೋರ್ಟ್‍ನ  ವೃತ್ತಿ ನ್ಯಾಯಮೂರ್ತಿ ಎಸ್.ಕೆ.ಪಾಂಡೆ ಅವರು ಈ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿದ್ದಾರೆ ಎಂದು ನಿನ್ನೆ ರಾತ್ರಿ ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಸಿಮಿ ಉಗ್ರರು ಅತಿ ಭದ್ರತೆಯ ಭೋಪಾಲ್ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡ ಹಾಗೂ ಆನಂತರ ಎನ್‍ಕೌಂಟರ್‍ನಲ್ಲಿ ಹತರಾದ ಘಟನೆಗಳ ಬಗ್ಗೆ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್.ಕೆ.ಪಾಂಡೆ ಅವರು ನ್ಯಾಯಾಂಗ ತನಿಖೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ನಿನ್ನೆ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದ ಬೆನ್ನೆಲ್ಲೇ ರಾಜ್ಯ ಸರ್ಕಾರ ಈ ಅದೇಶ ನೀಡಿದೆ.
ಸಿಮಿ ಉಗ್ರರು ಬಾರಕ್‍ನ ಬಾಗಿಲುಗಳನ್ನು ನಕಲಿ ಕೀ ಬಳಸಿ ತೆಗೆದು ನಂತರ ಜೈಲಿನ ವಾರ್ಡನ್ ರಾಮಶಂಕರ್ ಯಾದವ್‍ರ ಕುತ್ತಿಗೆಯನ್ನು ಸ್ಟೀಲ್ ತಟ್ಟೆ, ಚಮಚಗಳಿಂದ ಭಯಾನಕವಾಗಿ ಸೀಳಿ ಕೊಂದರು. ಮೊತ್ತೊಬ್ಬ ಸಿಬ್ಬಂದಿ ಚಂದನ್‍ಸಿಂಗ್‍ರನ್ನು ಕಟ್ಟಿ ಹಾಕಿದರು. ನಂತರ ಹೊದಿಕೆಯನ್ನೇ ಹಗ್ಗವನ್ನಾಗಿ ಮಾಡಿಕೊಂಡು ಭೋಪಾಲ್ ಸೆಂಟ್ರಲ್ ಜೈಲಿನ 25 ಅಡಿ ಎತ್ತರದ ಗೋಡೆಯನ್ನು ಏರಿ ಅಲ್ಲಿಂದ ಜಿಗಿದು ಪರಾರಿಯಾಗಿದ್ದರು ಎಂಬುದು  ಪೊಲೀಸರ ಹೇಳಿಕೆಯಾಗಿದೆ.

ಈ ಜೈಲಿನಲ್ಲಿ ಒಟ್ಟು 29 ಸಿಮಿ ವಿಚಾರಣಾಧೀನ ಕೈದಿಗಳಿದ್ದರು. ಇವರನ್ನು ಒಟ್ಟು ಎರಡು ಬಾರಕ್‍ಗಳಲ್ಲಿ ಇಡಲಾಗಿತ್ತು. ಇವರಲ್ಲಿ 9 ಮಂದಿ ತಪ್ಪಿಸಿಕೊಂಡಿದ್ದರು. ಅವರು ನಾಪತ್ತೆಯಾದ ಒಂಭತ್ತು ಗಂಟೆಗಳಲ್ಲೇ  ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 8 ಸಿಮಿ ಉಗ್ರರು ಹತರಾದರು.  ಹತರಾದ ಎಂಟು ಮಂದಿಯಲ್ಲಿ ನಾಲ್ವರು ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದ್ದರು. ಇವರೆಲ್ಲ ಬ್ಯಾಂಕ್ ದರೋಡೆ, ವಿಧ್ವಂಸಕ ಕೃತ್ಯ, ಭಯೋತ್ಪಾದನೆ ಪ್ರಚೋದನೆ ಸೇರಿದಂತೆ ಹತ್ತು ಹಲವು ಆರೋಪಗಳಲ್ಲಿ ಶಾಮೀಲಾಗಿದ್ದರು.  ಈ ಎನ್‍ಕೌಂಟರ್ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin