ಗ್ಯಾಸ್ ಚೇಂಬರ್‍ನಂಥಾದ ರಾಷ್ಟ್ರ ರಾಜಧಾನಿ ದೆಹಲಿ : ಉಸಿರಾಡಲೂ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Air-Pollution-002

ನವದೆಹಲಿ, ನ.6- ರಾಷ್ಟ್ರ ರಾಜಧಾನಿ ನವದೆಹಲಿ ಕಳೆದ 17 ವರ್ಷಗಳಲ್ಲೇ ಮೊದಲ ಬಾರಿಗೆ ಭೀಕರ ಪರಿಸರ ಮಾಲಿನ್ಯದಿಂದ ತತ್ತರಿಸಿದ್ದು, ಗ್ಯಾಸ್ ಚೇಂಬರ್‍ನಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಲರ್ಜಿ, ಆಸ್ತಮಾ, ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಇನ್ನೊಂದೆಡೆ ಕೆಟ್ಟ ಗಾಳಿಯಿಂದ ರಕ್ಷಣೆ ಪಡೆಯಲು ಜನರು ಏರ್ ಮಾಸ್ಕ್‍ಗಳಿಗೆ ಮುಗಿಬೀಳುತ್ತಿದ್ದಾರೆ.  ದೆಹಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು, ಧೂಮಲೀಲೆಯಿಂದಾಗಿ ಜನರ ಆರೋಗ್ಯ ಏರುಪೇರಾಗಿದೆ. ಈಗಾಗಲೇ ಅಲರ್ಜಿ ಮತ್ತು ಆಸ್ತಮಾ ರೋಗಗಳಿಂದ ನರಳುತ್ತಿರುವವರು ಹೊಗೆ ಸೇವನೆಯಿಂದ ಇನ್ನಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದು, ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ದೆಹಲಿಯು ಗ್ಯಾಸ್ ಚೇಂಬರ್‍ನಂತಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ವ್ಯಾಖ್ಯಾನಿಸಿದ್ದು, ವಾಯು ಮಾಲಿನ್ಯದ ಸಮಸ್ಯೆ ನಿವಾರಣೆಗೆ ಕೇಂದ್ರ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.  ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿನ ಎಲ್ಲಾ ಶಾಲೆಗಳಿಗೆ ಮೂರು ದಿನಗಳ ರಜೆಯನ್ನು ವಿಸ್ತರಿಸಿ ಕ್ರೇಜಿವಾಲ್ ಆದೇಶ ನೀಡಿದ್ದಾರೆ. ಅಲ್ಲದೆ, ಮುಂದಿನ ಸೂಚನೆ ತನಕ ಯಾವುದೇ ಬೃಹತ್ ಕಟ್ಟಡಗಳ ನಿರ್ಮಾಣ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ವಾಯು ಮಾಲಿನ್ಯದ ಪ್ರಮಾಣವು ಹೆಚ್ಚಾಗಿ ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಜನರು ಏರ್ ಮಾಸ್ಕ್‍ಗಳ (ಗಾಳಿ ಮುಖವಾಡಗಳು) ಮೊರೆ ಹೋಗುತ್ತಿದ್ದು, ಔಷಧಿ ಮಳಿಗೆಗಳು ಮತ್ತು ಆಸ್ಪತ್ರೆಗಳಲ್ಲಿ ಇವುಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ.

ಮಾರಕ ಪರಿಸರ ಮಾಲಿನ್ಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ 1,800 ಪ್ರಾಥಮಿಕ ಶಾಲೆಗಳಿಗೆ ಇನ್ನೂ ಮೂರು ದಿನಗಳ ಕಾಲ ರಜೆ ವಿಸ್ತರಿಸಲಾಗಿದೆ.  ಮೊದಲೇ ವಾಯು ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ದೀಪಾವಳಿ ನಂತರ 15 ಪಟ್ಟು ಹೆಚ್ಚಿಗೆ ಪರಿಸರ ಕಲುಷಿತಗೊಂಡಿದೆ.  ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದನ್ನು ತಡೆಯಲು ಸುಮಾರು 9 ಲಕ್ಷಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ 1800 ಪ್ರೈಮರಿ ಸ್ಕೂಲ್‍ಗಳನ್ನು ಸೋಮವಾರವೂ ಬಂದ್ ಮಾಡಲು ಆದೇಶಿಸಲಾಗಿದೆ. ದೆಹಲಿಯ ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಹೊಗೆಯಿಂದ ದೃಷ್ಟಿ ಮಬ್ಬಾಗುವ ಕಾರಣ ಚಾಲಕರು ಜಾಗ್ರತೆಯಿಂದ ವಾಹನಗಳನ್ನು ಚಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.  ದೀಪಾವಳಿ ಬಳಿಕ ಪರಿಸರ ಮಾಲಿನ್ಯದಿಂದ ದೆಹಲಿಯ ಅನೇಕ ನಾಗರಿಕರಲ್ಲಿ ಉಸಿರಾಟದ ಸಮಸ್ಯೆ, ಅಲರ್ಜಿ ಆಸ್ತಮಾ, ಶ್ವಾಸಕೋಶ ತೊಂದರೆ ಮೊದಲಾದ ರೋಗಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ.

► Follow us on –  Facebook / Twitter  / Google+

Facebook Comments

Sri Raghav

Admin