ರೈತರು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

CHirate

ಕುಣಿಗಲ್, ನ.6- ರೈತರು ಇಟ್ಟಿದ್ದ ಬೋನಿಗೆ ಎರಡು ವರ್ಷದ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ಉತ್ತರಿದುರ್ಗ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ 6-7 ವರ್ಷಗಳಿಂದೀಚೆಗೆ ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಕುರಿ, ಮೇಕೆಗಳನ್ನು ತಿಂದು ಹಾಕಿರುವುದರ ಜತೆಗೆ ರೈತರ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ.
ಇದರಿಂದ ಬೇಸತ್ತ ರೈತರು ಕೆಲವು ಕಡೆ ಬೋನುಗಳನ್ನು ಇಟ್ಟು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಸಮೀಪವಿರುವ ಉತ್ತರಿದುರ್ಗ ಬೆಟ್ಟದಲ್ಲಿ ಚಿರತೆಗಳ ಹಿಂಡು ವಾಸವಿದ್ದು, ಇಲ್ಲಿನ ಸುತ್ತಮುತ್ತಲ ಗ್ರಾಮಗಳಿಗೆ ಹಾಗಾಗ್ಗೆ ಲಗ್ಗೆಯಿಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ನಿನ್ನೆ ರಾತ್ರಿಯೂ ಕೂಡ ಬೊಮ್ಮೇನಹಳ್ಳಿ, ರಂಗಮ್ಮನಪಾಳ್ಯ, ಬುಕ್ಕಸಾಗರ, ಉತ್ತರಿಕೊಪ್ಪಲು ಗ್ರಾಮಸ್ಥರೆಲ್ಲ ಸೇರಿ ಅರಣ್ಯ ಇಲಾಖೆಯಿಂದ ಬೋನು ಪಡೆದುಕೊಂಡು ಬೋನಿಗೆ ನಾಯಿ ಕಟ್ಟಿ ಹಾಕಿ ಕಾವಲು ಕಾಯುತ್ತಿದ್ದರು. ಈ ವೇಳೆ ನಾಯಿ ಬೇಟೆಯಾಡಲು ಬಂದ ಎರಡು ವರ್ಷದ ಚಿರತೆ ಸೆರೆ ಸಿಕ್ಕಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೆರೆ ಸಿಕ್ಕ ಚಿರತೆಯನ್ನು ವಶಕ್ಕೆ ಪಡೆದು ಬನ್ನೇರುಘಟ್ಟಕ್ಕೆ ಬಿಡಲು ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ತಾಲ್ಲೂಕಿನ ಹುಲಿಯೂರುದುರ್ಗ ಹೇಮಗಿರಿ ಬೆಟ್ಟದ ತಪ್ಪಲು, ದೀಪಾಂಬುದಿ ಅರಣ್ಯ ಪ್ರದೇಶ, ಕಂಪ್ಲಾಪುರ, ಶ್ರೀಗಂಧಕಾವಲು, ಅಂಗಲಕುಟ್ಟೆ ಮನ್ನಚೆನ್ನಿ, ಹೆಬ್ಬೆಟ್ಟ, ಬೆಟ್ಟದ ರಂಗನಾಥಸ್ವಾಮಿ ತಪ್ಪಲು ಅರಣ್ಯ ಪ್ರದೇಶಗಳಲ್ಲಿ ಆಸುಪಾಸಿನ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಚಿರತೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಈ ಭಾಗದ ಸುತ್ತಮುತ್ತಲ ರೈತರು ತಮ್ಮ ಜಮೀನುಗಳಲ್ಲಿ ಬೇಸಾಯ ಮಾಡದೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದು ದುರಂತವೇ ಸರಿ.

► Follow us on –  Facebook / Twitter  / Google+

Facebook Comments

Sri Raghav

Admin