ನಾಳೆಯಿಂದ ಭಾರತ-ಇಂಗ್ಲೆಂಡ್ ಟೆಸ್ಟ್ : ಆಂಗ್ಲರ ಸದೆ ಬಡಿಯಲು ಕೊಹ್ಲಿ ಪಡೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Test-02

ರಾಜ್‍ಕೋಟ್, ನ.8– ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತ ನಡುವಣ ನಡೆಯುವ ಐದು ಟೆಸ್ಟ್‍ಗಳ ಸರಣಿಯ ಮೊದಲ ಪಂದ್ಯ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಾಳೆ ಆರಂಭವಾಗಲಿದೆ. ಟೆಸ್ಟ್‍ನಲ್ಲಿ ನಂ.1 ತಂಡವಾಗಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಆಂಗ್ಲರನ್ನು ಮಣಿಸಲು ಸಜ್ಜಾಗಿದೆ.  ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಹಾಗೂ ಕೀವಿಸ್ ತಂಡಗಳನ್ನು ಮಣ್ಣು ಮುಕ್ಕಿಸಿ ಟೆಸ್ಟ್ ಸರಣಿ ಜಯಿಸಿರುವ ಆತಿಥೇಯ ತಂಡ ಈಗ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.  ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಭಾರತ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ. ನ್ಯೂಜಿಲೆಂಡ್ ವಿರುದ್ದ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆತಿಥೇಯ ತಂಡ ಸಾಂಘಿಕ ಪ್ರದರ್ಶನ ನೀಡಿತ್ತು. ಈಗ ಇಂಗ್ಲೆಂಡ್ ವಿರುದ್ಧ ಅದೇ ಲಯ ಮುಂದುವರಿಸಲು ಕಾತರವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮ, ಉಮೇಶ್ ಯಾದವ್, ಶಮಿ, ಆರ್.ಅಶ್ವಿನ್, ಅಮಿತ್ ಮಿಶ್ರ ಹಾಗೂ ರವಿಚಂದ್ರನ್ ಅಶ್ವಿನ್ ಭರ್ಜರಿ ಫಾರಂನಲ್ಲಿದ್ದು, ತಂಡಕ್ಕೆ ಗೆಲುವು ನೀಡಲು ಅಣಿಯಾಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯಾ ರಹಾನೆ, ಮುರಳಿ ವಿಜಯ್, ವೃದ್ಧಿಮಾನ್ ಸಹಾ ತಂಡಕ್ಕೆ ಯಾವುದೇ ಸಂದರ್ಭದಲ್ಲೂ ನೆರವಾಗಲಿದ್ದಾರೆ.  ಹೀಗಾಗಿ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿರುವ ಕೊಹ್ಲಿ ಪಡೆ ಗೆಲುವಿನ ಮುನ್ನುಡಿ ಬರೆಯಲು ಸಿದ್ಧವಾಗಿದೆ. ಇನ್ನು ಕರ್ನಾಟಕದ ಕರುಣ್ ನಾಯರ್ ತಂಡಕ್ಕೆ ಆಯ್ಕೆಯಾಗಿದ್ದು, ನಾಳಿನ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಇಂಗ್ಲೆಂಡ್ ತಂಡವು ಇತ್ತೀಚೆಗಷ್ಟೆ ಬಾಂಗ್ಲಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ನಿರಾಸೆ ಪ್ರದರ್ಶನ ನೀಡಿ 1-1 ರಿಂದ ಸಮಬಲ ಸಾಧಿಸಿತ್ತು.

ಅಲ್ಲದೆ, ಬಾಂಗ್ಲಾ ವಿರುದ್ಧ ಆಂಗ್ಲರು ಎರಡನೆ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್ ಬಾರ್ಡ್, ಗ್ರಾಮ್ ಸ್ವಾನ್, ಮ್ಯಾಂಟೆ ಪೆನಾಸರ್ ತಂಡದಲ್ಲಿದ್ದು, ಆತಿಥೇಯ ತಂಡಕ್ಕೆ ಯಾವುದೇ ಕ್ಷಣದಲ್ಲಿ ಶಾಕ್ ನೀಡಲು ರೆಡಿಯಾಗಿದ್ದಾರೆ. ಆದರೆ, ಮುಂಚೂಣಿ ಬೌಲರ್ ಆಗಿರುವ ಜೇಮ್ಸ್ ಆ್ಯಂಡರ್‍ಸನ್ ಭುಜದ ನೋವಿನಿಂದ ಬಳಲುತ್ತಿದ್ದು, ನಾಳಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ. ಬ್ಯಾಟಿಂಗ್‍ನಲ್ಲಿ ನಾಯಕ ಅಲೆಸ್ಟಾರ್ ಕುಕ್, ಕೆವಿನ್ ಪೀಟರ್‍ಸನ್ ಸೇರಿದಂತೆ ಪ್ರಮುಖ ಬ್ಯಾಟ್ಸ್‍ಮನ್‍ಗಳು ತಂಡದಲ್ಲಿದ್ದಾರೆ. ಹೀಗಾಗಿ ಎರಡೂ ತಂಡಗಳು ಸಮಬಲ ಸಾಧಿಸಿದ್ದು, ಯಾವುದೇ ಕ್ಷಣದಲ್ಲಿ ಆತಿಥೇಯರಿಗೆ ಶಾಕ್ ನೀಡಲು ಕುಕ್ ಪಡೆ ರಣತಂತ್ರ ರೂಪಿಸಿದೆ. ಇದೇ ಮೊದಲ ಬಾರಿಗೆ ಡಿಆರ್‍ಎಸ್ ನಿಯಮವನ್ನು ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್‍ನಲ್ಲಿ ಅಳವಡಿಸಲು ಚಿಂತನೆ ನಡೆಸಿದ್ದು, ಆದರೆ, ಈ ನಿಯಮಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಆದರೆ, ಈ ನಿಯಮವನ್ನು ಅಳವಡಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin