ಸಿಎಂ ಜನಪ್ರಿಯತೆ ಸಹಿಸದೆ ಷಡ್ಯಂತ್ರ : ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

cm-siddu

ಬೆಂಗಳೂರು, ನ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಮೇಲ್ವರ್ಗದವರು ಇಂದು ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಂದಿಲ್ಲಿ ಹೇಳಿದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿಯಲ್ಲಿ ಮಾತನಾಡಿದ ಶ್ರೀಗಳು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮೇಲ್ವರ್ಗದವರು ಈ ರೀತಿಯ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ದೇವರಾಜ ಅರಸು ನಂತರ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹಿಸದೆ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಈ ಕಿತ್ತಾಟದಲ್ಲಿ ಟಿಪ್ಪು ಬಲಿಯಾಗುತ್ತಿ ದ್ದಾನೆ ಎಂದು ವಿಷಾದಿಸಿದರು.
ದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದ ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ಒದಗಿಸುವ ಸಾಚಾರ್ ಸಮಿತಿಯ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಮಾಡಿ ಸರ್ಕಾರಕ್ಕೆ ಕಳುಹಿಸಬೇಕಿದೆ ಎಂದ ಅವರು, ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸಲಾಗುತ್ತಿಲ್ಲ, ಇದರಿಂದ ಮುಸ್ಲಿಮರಿಗೆ ಕಿರೀಟವೂ ಬರುವುದಿಲ್ಲ ಎಂದು ಹೇಳಿದರು.ಟಿಪ್ಪು ಓರ್ವ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ. ನಾಲ್ಕು ಬಾರಿ ಬ್ರಿಟಿಷರೊಂದಿಗೆ ಸೆಣಸಿದ್ದ. ಕೆಲವೇ ದಿನಗಳ ಹಿಂದೆ ಟಿಪ್ಪು ಮಾದರಿ ರಾಜ ಎಂದಿದ್ದ ಕೆಲವರು ಇಂದು ಅದಕ್ಕೆ ವಿರೋಧಿಸುತ್ತಿದ್ದಾರೆ ಎಂದು ನುಡಿದರು.ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಸರಿಯಾಗಿದೆ. ಯಾವುದೇ ಜಯಂತಿ ಮಾಡಲಿ ಅದಕ್ಕೆ ರಜೆ ನೀಡಬೇಡಿ. ಅಂದು ಒಂದು ಗಂಟೆ ಹೆಚ್ಚು ಕಾಲ ಕೆಲಸ ನಿರ್ವಹಿಸುವ ಮೂಲಕ ಗೌರವ ಸೂಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಚಿವೆ ಉಮಾಶ್ರೀ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin