ಆರ್‍ಟಿಇಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

adhar
ಬೆಂಗಳೂರು, ನ.12- ಮುಂಬರುವ 2017-18ನೆ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಸಿ) ಪ್ರಕಾರ ಅಲ್ಪಸಂಖ್ಯಾತರ ಸ್ವಾಮ್ಯದಲ್ಲಿ ಇಲ್ಲದ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯುವ ಸಲುವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತರು ತಿಳಿಸಿದ್ದಾರೆ.ಆನ್‍ಲೈನ್ ಮೂಲಕ ಅರ್ಜಿಗಳನ್ನು 1 ಜನವರಿ 2017 ರಿಂದ ಸ್ವೀಕರಿಸಲಾಗುವುದು. ಪ್ರಸ್ತುತ ವಾಸವಾಗಿರುವ ಸ್ಥಳದಲ್ಲಿ ಇರುವ ನೆರೆಹೊರೆಯ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲು ಇಚ್ಛೆಯುಳ್ಳಪೋಷಕರು ತಮ್ಮ ಅಂದರೆ ಮಗುವಿನ ತಂದೆ ಅಥವಾ ತಾಯಿ ಹಾಗೂ ಮಗುವಿನ ಆಧಾರ್ ನಂಬರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಜಾತಿಗೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದಲ್ಲಿ ಆದಾಯ ಪ್ರಮಾಣ ಪತ್ರ, ಮಗುವಿನ ಜನನ ಪ್ರಮಾಣ ಪತ್ರ ಇವುಗಳನ್ನು ಡಿಸೆಂಬರ್ 31 ರೊಳಗೆ ಸಿದ್ದಪಡಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಅದೇ ರೀತಿ ಅನಾಥಾಲಯದ ಮುಖ್ಯಸ್ಥರು ಅನಾಥ ಮಗುವಿನ ಪೋಷಕರಾಗಿ ಮಗುವಿನ ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಆಧಾರ್ ನಂಬರ್ ಸಿದ್ದಪಡಿಸಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಪ್ರಮಾಣ ಪತ್ರಗಳು ಹಾಗೂ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಆಧಾರ್ ಸಂಖ್ಯೆಯನ್ನು, ಪೋಷಕರ ಹಾಗೂ ಮಗುವಿನ ಬೆರಳಚ್ಚನ್ನು ಬಳಸಿ ಆಧಾರ್ ಪ್ರಾಧಿಕಾರದ ಡಾಟಾಬೇಸ್‍ನೊಂದಿಗೆ ಅರ್ಜಿ ಸಲ್ಲಿಸುವ ಸ್ಥಳದಲ್ಲೇ ತಾಳೆ ಮಾಡಲಾಗುವುದು.ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣಪತ್ರದ ಸಂಖ್ಯೆಯನ್ನು ಅಟಲ್‍ಜಿ ಜನಸ್ನೇಹಿ ಕೇಂದ್ರದ ಮಾಹಿತಿಯೊಂದಿಗೆ ತಾಳೆಮಾಡಲಾಗುವುದು. ಆಧಾರ್ ಸಂಖ್ಯೆ ಹಾಗೂ ಪ್ರಮಾಣ ಪತ್ರಗಳು ನೈಜವಾಗಿದ್ದ ಸಂದರ್ಭಗಳಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದು, ಇಲ್ಲವಾದಲ್ಲಿ ಅರ್ಜಿಯನ್ನು ಸ್ಥಳದಲ್ಲೇ ತಿರಸ್ಕರಿಸಲಾಗುವುದು.

► Follow us on –  Facebook / Twitter  / Google+

Facebook Comments

Sri Raghav

Admin