ಮೂರು ವರ್ಷಗಳಲ್ಲಿ ಬಡವರಿಗೆ 9.80ಲಕ್ಷ ಮನೆ ನಿರ್ಮಾಣವಾಗಿದೆ : ಸಚಿವ ಎಂ.ಕೃಷ್ಣಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

m--krishnappa

ಮಧುಗಿರಿ, ನ.13- ಸರ್ಕಾರದ ವತಿಯಿಂದ ಕಳೆದ ಮೂರೂವರೆ ವರ್ಷದಲ್ಲಿ 9.80 ಲಕ್ಷ ಮನೆಗಳನ್ನು ಬಡ ಜನರಿಗಾಗಿ ನಿರ್ಮಿಸಲಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಮಾಹಿತಿ ನೀಡಿದರು.ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ರಾಜೀವ್ ಗಾಂಧೀ ಗ್ರಾಮೀಣ ವಸತಿ ನಿಗಮದ ವತಿಯಿಂದ ಮಂಜೂರಾದ ಮನೆಗಳ ಮಂಜೂರಾತಿ ಆದೇಶ ಪತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ರಹಿತರಿಗೆ ಸೂರು ಒದಗಿಸಿ ಪ್ರತಿಯೊಂದು ಕುಟುಂಬವು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸುವುದೇ ಸರ್ಕಾರದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 6 ಲಕ್ಷ ಮನೆಗಳನ್ನು ಬಡ ಜನರಿಗಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

 

ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ತಾಲೂಕಿನ ಅಧಿಕಾರಿಗಳು ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಿರುವುದನ್ನು ನೋಡಿದರೆ ಶಾಸಕರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಈ ಭಾಗಕ್ಕೆ ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆಗೆ ಮನವಿ ಸಲ್ಲಿಸಿದ್ದು, ಅತೀ ಶೀಘ್ರದಲ್ಲಿ ಗಾರ್ಮೆಂಟ್ಸ್ ಆರಂಭಿಸುವ ಭರವಸೆ ನೀಡಿದರು.ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ತಾಲೂಕು ಬರ ಪೀಡಿತ ಹಾಗೂ ಅತೀ ಹಿಂದುಳಿದ ಪ್ರದೇಶವಾಗಿದ್ದು, ಎತ್ತಿನ ಹೊಳೆ ಮೂಲಕ ತಾಲೂಕಿನ 45 ಕೆರೆಗಳಿಗೆ ನೀರು ಹರಿಸುವ ಯೋಜನೆಯಿದ್ದು, ಕೆಲವು ಕಾರಣದಿಂದಾಗಿ ಯೋಜನೆ ವಿಳಂಬವಾಗುತ್ತದೆ. ಏನೇ ಅಡಚಣೆ ಬಂದರೂ ನಿವಾರಿಸಿಕೊಂಡು ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು ಎಂಬ ಭರವಸೆ ನೀಡಿದರು.

 
ಸಂಸದ ಎಸ್.ಪಿ ಮುದ್ದಹನುಮೇಗೌಡ, ತಾಪಂ ಇಒ ಮಹಲಿಂಗಯ್ಯ ಮಾತನಾಡಿದರು. ಜಿಪಂ ಸದಸ್ಯರಾದ ಶಾಂತಲಾರಾಜಣ್ಣ, ಜಿ.ಜೆ.ರಾಜಣ್ಣ, ಕೊಂಡವಾಡಿ ತಿಮ್ಮಯ್ಯ, ಚೌಡಪ್ಪ, ಪುರಸಭಾಧ್ಯಕ್ಷೆ ರಾಧಾನಾರಾಯಣ್, ಮಾಜಿ ಅಧ್ಯಕ್ಷರಾದ ಎನ್.ಗಂಗಣ್ಣ, ಅಯೂಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಗೋಪಾಲ್, ಮಲ್ಲಿಕಾರ್ಜುನಯ್ಯ, ಜಿಪಂ ಸಿಇಒ ಶಾಂತಾರಾಮ್, ಉಪವಿಭಾಗಾಧಿಕಾರಿ ಅನಿತಾಲಕ್ಷ್ಮೀ, ತಹಶೀಲ್ದಾರ್ ಅನಂತರಾಮು, ನೌಕರರ ಸಂಘದ ಅಧ್ಯಕ್ಷ ಮಹಲಿಂಗೇಶ್ ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin