ಎಲ್ಲೆಲ್ಲೂ ಜನ..! ಹಣಕ್ಕಾಗಿ ಹೈರಾಣ..!! ಇಂದು ಕೂಡ ತಪ್ಪಿಲ್ಲ ಬವಣೆ..!!

ಈ ಸುದ್ದಿಯನ್ನು ಶೇರ್ ಮಾಡಿ

11-vij-2a-atm bundh

ಬೆಂಗಳೂರು,ನ.14- ಹಣ… ಹಣ… ಹಣ… ತಮ್ಮಲ್ಲಿರುವ ಹಣವನ್ನು ಡೆಪಾಸಿಟ್ ಮಾಡಲು ಧಾವಂತದಲ್ಲಿರುವ ಜನ… ಅಲ್ಲದೆ ತಮಗೆ ಅಗತ್ಯವಾದ ಹಣವನ್ನು ಎಕ್ಸ್‍ಚೇಂಜ್ ಮಾಡಿಕೊಳ್ಳಲು ಬ್ಯಾಂಕ್‍ಗಳಿಗೆ, ಅಂಚೆ ಕಚೇರಿಗಳಿಗೆ ಮುಗಿಬಿದ್ದಿರುವ ಮಂದಿ… ಎಲ್ಲಿ ನೋಡಿದರೂ ಹಣಕ್ಕಾಗಿ ಜನ ಹೈರಾಣಾಗಿರುವ ದೃಶ್ಯವೇ ಕಂಡುಬರುತ್ತಿದೆ… ಎಲ್ಲ ಎಟಿಎಂ, ಬ್ಯಾಂಕ್, ಅಂಚೆ-ಕಚೇರಿಗಳ ಮುಂದೆ ಬೆಳ್ಳಂಬೆಳಗ್ಗೆಯಿಂದಲೇ ಉದ್ದುದ್ದ ಸಾಲು… ವೃದ್ಧರು, ಮಹಿಳೆಯರು, ಯುವಕರು, ಯುವತಿಯರು, ಗೃಹಿಣಿಯರು ಸೇರಿದಂತೆ ಎಲ್ಲರೂ ಕೈಯಲ್ಲಿ ಹಣ, ಗುರುತಿನ ಚೀಟಿ ಹಿಡಿದು ವ್ಯವಸ್ಥೆಯನ್ನು ಶಪಿಸುತ್ತ ಮತ್ತೆ ಕೆಲವರು ಆಗಿರುವ ವ್ಯವಸ್ಥೆ ಉತ್ತಮವಾಗಿದೆ ಎಂದು ಪ್ರಶಂಸಿಸುತ್ತ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಇಂದು ಕೂಡ ಕಂಡುಬಂತು. ನಾವು ಕಟ್ಟಿರುವ ಹಣವನ್ನು ಪಡೆಯಲು ಈ ರೀತಿ ದಿನಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಹಣಕ್ಕಾಗಿ ಜನ ಹೆಣಗಾಡುತ್ತಿದ್ದರು.ಬ್ಯಾಂಕ್‍ಗಳು ಬೆಳಗ್ಗೆ 10 ರಿಂದ 6 ಗಂಟೆವರೆಗೆ ಕಾರ್ಯನಿರ್ವಹಿಸಿದರೂ ಜನರ ಹಣದ ಅಗತ್ಯತೆ ಪೂರೈಸಲು ಸಾಧ್ಯವಾಗುತ್ತಿಲ್ಲ.

 

ಠೇವಣಿ ಮಾಡಿಕೊಳ್ಳಲು ಮತ್ತು ಹಣ ಬದಲಾವಣೆ ಮಾಡಿಕೊಳ್ಳಲು ಬೇರೆ ಬೇರೆ ಕೌಂಟರ್‍ಗಳನ್ನು ತೆರೆಯಲಾಗಿದೆ. ಅಲ್ಲದೆ, ಸರ್ಕಾರ ಬಿಡುಗಡೆ ಮಾಡಿರುವ 2000ರೂ. ನೋಟು ಕೈಗೆ ಸಿಕ್ಕಿತು ಎಂಬ ಖುಷಿಯಲ್ಲಿ ಅದನ್ನು ಪಡೆದು ಹೋದವರಿಗೆ ಸಂಕಟ ಎದುರಾಗಿದೆ. ಸದ್ಯ ಅದು ಚಲಾವಣೆ ಆಗುತ್ತಿಲ್ಲ. ಕಾರಣ ಅದಕ್ಕೆ ಚಿಲ್ಲರೆ ಯಾರೂ ನೀಡುತ್ತಿಲ್ಲ. ಇನ್ನು ಎಟಿಎಂ ಮಿಷನ್‍ಗಳ ಮುಂದೆ ಉದ್ದುದ್ದ ಸಾಲು ಮುಂಜಾನೆಯಿಂದಲೇ ಮುಂದುವರಿದಿದೆ. ಎಟಿಎಂಗಳಲ್ಲಿ ಹಣದ ಮಿತಿಯನ್ನು 2000 ದಿಂದ 2500ರೂ.ಗಳಿಗೆ ಹೆಚ್ಚಿಸಲಾಗಿದೆ. ಆದರೆ, ಎಟಿಎಂ ಮಿಷನ್‍ಗಳ ಮೂಲಕ ಗ್ರಾಹಕರಿಗೆ ಹಣ ಪೂರೈಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‍ಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಹಣದ ಮಿತಿಯನ್ನು 4000 ದಿಂದ 4500ರೂ.ಗಳಿಗೆ ಹೆಚ್ಚಿಸಲಾಗಿದೆ. ಇಲ್ಲೂ ಕೂಡ ಅಗತ್ಯಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆ ಪೂರೈಸಲಾಗುತ್ತಿಲ್ಲ. ಹಾಗಾಗಿ ಜನರು ಕಾದು ಕಾದು ಹೈರಾಣಾಗುತ್ತಿದ್ದಾರೆ. ಕೆಲವು ಕಡೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದ ಘಟನೆಗಳು ಕಂಡುಬಂದಿವೆ. ಜನರ ಸಹನೆಯ ಕಟ್ಟೆಯೊಡೆಯುತ್ತಿದೆ. ಎಲ್ಲವನ್ನೂ ಸಾರ್ವಜನಿಕರು ದೇಶಕ್ಕೆ ಒಳಿತಾಗುತ್ತದೆ ಎಂದು ಸಹಿಸಿಕೊಳ್ಳತೊಡಗಿದ್ದಾರೆ.

 

ಆದರೂ ಹಣಕಾಸಿನ ವಿಷಯ ಸೂಕ್ಷ್ಮವಾಗಿರುವುದರಿಂದ ಸರ್ಕಾರ ಈ ಬಗ್ಗೆ ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕು. ಬಡ ಮತ್ತು ಮಧ್ಯಮ ವರ್ಗದ ಜನರ ಹಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರಿಗೆ ಸಕಾಲದಲ್ಲಿ ಹಣ ಸಿಗುವಂತೆ ನೋಡಿಕೊಳ್ಳಬೇಕು. ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಹಣಕ್ಕಾಗಿ ಬ್ಯಾಂಕ್‍ನ ಮುಂದೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ.ದಿನಗೂಲಿ ನೌಕರರು, ಗಾರ್ಮೆಂಟ್ಸ್ ನೌಕರರು, ಗಾರೆ ಕೆಲಸದವರು ಸೇರಿದಂತೆ ಶ್ರಮಿಕರು, ಬಡವರು ತಮ್ಮಲ್ಲಿರುವ 500, 1000ರೂ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಕೆಲಸ ಬಿಟ್ಟು ಬ್ಯಾಂಕ್ ಮುಂದೆ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.ಇನ್ನು ಮನೆಯ ಅಗತ್ಯತೆಗಳಿಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಅನಿವಾರ್ಯವಾಗಿ ಹಣ ಪಡೆಯಬೇಕಾಗಿದೆ. ಹಾಗಾಗಿ ಎಟಿಎಂಗಳ ಮುಂದೆಯೂ ಕ್ಯೂ ಹೆಚ್ಚಾಗಿದೆ. ಇದು ನ.8ರಿಂದ ಈವರೆಗೂ ಅದೇ ಪರಿಸ್ಥಿತಿ ಮುಂದುವರಿದಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಣ್ಣ ಪುಟ್ಟ ವ್ಯಾಪಾರಿಗಳು, ಫುಟ್‍ಪಾತ್ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ಇದರಿಂದ ತೊಂದರೆಯಾಗುತ್ತಿದ್ದು, ಅವರೆಲ್ಲ ಗೊಣಗುತ್ತಲೇ ದಾಖಲೆಗಳನ್ನು ಹಿಡಿದು ಬ್ಯಾಂಕ್ ಮುಂದೆ ನಿಂತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin