ಹಿಂದುಳಿದವರ ಸಮಾವೇಶ ಯಶಸ್ಸಿಗೆ ಬಿ.ಎಸ್.ಯಡಿಯೂರಪ್ಪ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

yadi

ಬೆಂಗಳೂರು, ನ.14-ಇದೇ 27 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲು ಕಾರ್ಯಕರ್ತರು ಶ್ರಮಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.  ಸಮಾವೇಶ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕಾರ್ಯಕರ್ತರನ್ನು ಕರೆತರುವುದು ಪಕ್ಷದ ನಾಯಕರ ಜವಾಬ್ದಾರಿ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕಾದರೆ ಈ ಸಮಾವೇಶ ಯಶಸ್ವಿಗೊಳಿಸಲು ಪಕ್ಷದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು. ಈಗಾಗಲೇ ಎಪಿಎಂಸಿ ಚುನಾವಣೆ ನಡೆಯುತ್ತಿರುವುದರಿಂದ ಅಂದಿನ ಸಮಾವೇಶಕ್ಕೆ ರಾಜ್ಯಾದ್ಯಂತ ಕಾರ್ಯಕರ್ತರು ಬರಲಾಗುವುದಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 50 ಸಾವಿರ ಕಾರ್ಯಕರ್ತರು ಬರುವ ನಿರೀಕ್ಷೆ ಇದೆ. 150 ಸ್ಥಾನಗಳನ್ನು ಗೆಲ್ಲಬೇಕಾದರೆ ಇಂದಿನಿಂದ ಪೂರ್ವತಯಾರಿ ಅಗತ್ಯ ಎಂದು ಅವರು ತಿಳಿಸಿದರು.

 
ಈ ಸಮಾವೇಶಕ್ಕೆ ಆಗಮಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಒಪ್ಪಿಕೊಂಡಿದ್ದಾರೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಈ ಸಮಾವೇಶ ನಮಗೆ ಪ್ರೇರಣೆ ನೀಡಲಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡ ಆರ್.ಅಶೋಕ್ ಮಾತನಾಡಿ, ಹಿಂದೆ ಬಿಜೆಪಿ ಚುನಾವಣೆ ಪ್ರಚಾರದ ವೇಳೆ ನಾವು ಈ ಸ್ಥಳದಲ್ಲೇ ಸಮಾವೇಶ ನಡೆಸಿದ್ದೆವು. ಅಂದು ನಗರದ ಜನತೆ ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರು. ಕಾಂಗ್ರೆಸ್ ಜನರಿಂದ ತಿರಸ್ಕøತವಾದರೂ ವಾಮಮಾರ್ಗದಿಂದ ಅಧಿಕಾರಕ್ಕೆ ಹಿಡಿದಿದೆ ಎಂದು ಕಿಡಿಕಾರಿದರು.
ಈಗ ಈ ಸ್ಥಳದಲ್ಲಿ ಸಮಾವೇಶ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಗೆ ಹೆಚ್ಚಿನ ಶಕ್ತಿ ಬರಬೇಕಾದರೆ ಈ ಸಮಾವೇಶ ಯಶಸ್ವಿಯಾಗಿ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ. ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕೆಗಳಿಗೆ ಜಾಹೀರಾತು ನೀಡಿ ಜನತೆಗೆ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಪದೇ ಪದೇ ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಜನಸಂಖ್ಯೆ ಶೇ.34ರಷ್ಟು ಇರುವ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕಣ್ಣಿಗೆ ಮಣ್ಣೆರಚುವುದೇ ಮಹಾನ್ ಸಾಧನೆಯಾಗಿದೆ ಎಂದು ಕುಹಕವಾಡಿದರು. ಶಾಸಕರಾದ ಡಾ.ಅಶ್ವಥ್‍ನಾರಾಯಣ್, ಮುನಿರಾಜು, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಜೆಪಿ ನಗರ ಘಟಕ ಅಧ್ಯಕ್ಷ ಸುಬ್ಬಣ್ಣ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin