ಪಡಿತರ ಚೀಟಿದಾರರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಗೆ ರಾಜ್ಯಸರ್ಕಾರ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

 

smart-card

ಬೆಂಗಳೂರು, ನ.17- ಪಡಿತರ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಪಡಿತರ ಚೀಟಿದಾರರಿಗೆ ಡೆಬಿಟ್ ಕಾರ್ಡ್ ಮಾದರಿಯ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆ ಯನ್ನು ಜಾರಿಗೆ ತರಲು ರಾಜ್ಯಸರ್ಕಾರ ಸಿದ್ಧತೆ ನಡೆಸಿದೆ. ಸೀಮೆಎಣ್ಣೆ ವಿತರಣೆಗೆ ಕೂಪನ್ ವ್ಯವಸ್ಥೆ ಯನ್ನು ಜಾರಿಗೆ ತಂದು ದುರ್ಬಳಕೆಗೆ ಕಡಿವಾಣ ಹಾಕಿದಂತೆ ಅನ್ನಭಾಗ್ಯ ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಎಲ್ಲಾ ಪಡಿತರ ಚೀಟಿದಾರರಿಗೂ ಸ್ಮಾರ್ಟ್ ಕಾರ್ಡ್ ನೀಡಿ ಆ ಕಾರ್ಡ್‍ನ ಖಾತೆಗೆ ಸಹಾಯ ಧನವನ್ನು ಜಮಾ ಮಾಡಲಾ ಗುತ್ತದೆ. ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರು ಪಡೆದಂತೆ ಈ ಕಾರ್ಡ್ ಖಾತೆಯ ಸಹಾಯಧನ ಕಡಿಮೆ ಯಾಗುತ್ತಾ ಹೋಗುತ್ತದೆ.

 
ಆಹಾರ ಧಾನ್ಯ ಹೊರತುಪಡಿಸಿ ಬೇರೆ ಪದಾರ್ಥಗಳನ್ನು ಪಡೆಯಲು ಅವಕಾಶ ಇರುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಬೆಂಗಳೂರಿನಲ್ಲಿ ಪಡಿತರ ಚೀಟಿದಾರರಿಗೆ ಕೂಪನ್ ವಿತರಿಸಿದ್ದು, ಅವರು ಬೇಕಾದ ನ್ಯಾಯಬೆಲೆ ಅಂಗಡಿಯಲ್ಲಿ ಧಾನ್ಯ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸದಾಗಿ ಪಡಿತರ ಚೀಟಿ ದಾರರಿಗೆ ಕೂಪನ್ ನೀಡಲು ಉದ್ದೇಶಿಸಿದೆ. ಉದ್ದೇಶಿತ ಕೂಪನ್ ಪಡೆದ ಪಡಿತರ ಚೀಟಿದಾರರು ತಮಗೆ ಬೇಕಾದ ಮಾಲ್ ಅಥವಾ ಮಳಿಗೆಯಲ್ಲಿ ಆಹಾರ ಧಾನ್ಯ ಪಡೆಯಬಹುದಾಗಿದೆ.ಕೇವಲ ನ್ಯಾಯಬೆಲೆ ಅಂಗಡಿಗೆ ಪಡಿತರ ಪಡೆಯಲು ಹೋಗಬೇಕಾದ ಅಗತ್ಯವಿರು ವುದಿಲ್ಲ. ಇಂತಹ ವ್ಯವಸ್ಥೆ ಜಾರಿಗೆ ತರುವುದರಿಂದ ಆಹಾರ ಧಾನ್ಯಗಳು ಹಾಳಾಗುವುದು ತಪ್ಪಲಿದೆ. ಅಲ್ಲದೆ, ಸಾಗಾಣಿಕೆ ವೆಚ್ಚವೂ ಉಳಿತಾಯವಾಗಲಿದೆ. ಜನರಿಗೆ ಗುಣಮಟ್ಟದ ಪಡಿತರವು ದೊರೆಯಲಿದೆ ಎಂಬ ಲೆಕ್ಕಾಚಾರ ಮಾಡಲಾಗಿದೆ.

 
ಈ ಸಂಬಂಧದ ಪ್ರಸ್ತಾವವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆಗಾಗಿ ಸಲ್ಲಿಸಿದೆ.
ಮುಖ್ಯಮಂತ್ರಿಗಳ ಸಮ್ಮತಿ ದೊರೆತ ಕೂಡಲೇ ಇದನ್ನು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುತ್ತದೆ. ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ.ಪಡಿತರ ಧಾನ್ಯ ವಿತರಣೆಯ ಉದ್ದೇಶಿತ ಹೊಸ ಪದ್ಧತಿ 2017ರಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸ್ಮಾರ್ಟ್ ಕಾರ್ಡ್ ಅಥವಾ ಕೂಪನ್ ಬಳಕೆಯಿಂದ ಬೋಗಸ್ ಕಾರ್ಡ್, ಆಹಾರ ಧಾನ್ಯದ ದುರ್ಬಳಕೆ, ಕಾಳಸಂತೆ ಮಾರಾಟಗಳನ್ನು ತಪ್ಪಿಸಲು ಸಹಾಯಕ ವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

 

Facebook Comments

Sri Raghav

Admin