ಸಂಸತ್‍ನಲ್ಲಿ ನೋಟು ಗಲಾಟೆ :ಪ್ರತಿಪಕ್ಷಗಳಿಂದ ಭಾರೀ ಕೋಲಾಹಲ, ಲೋಕಸಭೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

lok--sabha

ನವದೆಹಲಿ,ನ.17- ಐನೂರು ಮತ್ತು 1000 ರೂ.ಗಳ ಚಲಾವಣೆ ರದ್ದುಗೊಳಿಸಿರುವುದರಿಂದ ಜನತೆಗೆ ಆಗುತ್ತಿರುವ ತೀವ್ರ ತೊಂದರೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಭಾರೀ ಪ್ರತಿಭಟನೆಯಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ, ಗದ್ದಲ, ಸೃಷ್ಟಿಯಾಯಿತು. ಆಗ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.ಚಳಿಗಾಲದ ಸಂಸತ್ ಅಧಿವೇಶನದ 2ನೇ ದಿನವಾದ ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿಷಯವನ್ನು ಪ್ರಸ್ತಾಪಿಸಿದವು. ಈ ಬಗ್ಗೆ ಪ್ರಧಾನಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರ ನೀಡಬೇಕೆಂದು ಆಗ್ರಹಿಸಿದವು. ಮೋದಿ ಮತ್ತು ಜೇಟ್ಲಿ ಸದನದಲ್ಲಿ ಗೈರುಹಾಜರಾಗಿದ್ದರು. ಇದು ಪ್ರತಿಪಕ್ಷದ ಸದಸ್ಯರನ್ನು ಮತ್ತಷ್ಟು ಕೆರಳಿಸಿತು .
ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಿ ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಆಗ್ರಹಿಸಿ ಒಟ್ಟು 21 ಬಾರಿ ನಿಲುವಳಿ ಸೂಚನೆ ನೋಟಿಸ್ ನೀಡಿದರು. ದೇಶದೆಲ್ಲೆಡೆ ಜನರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಈ ಗಂಭೀರ ವಿಷಯದ ಬಗ್ಗೆ ಉತ್ತರ ನೀಡಬೇಕಾದ ಪ್ರಧಾನಿ ಮತ್ತು ಹಣಕಾಸು ಸಚಿವರು ಎಲ್ಲಿದ್ದಾರೆ ಎಂದು ಏರುದನಿಯಲ್ಲಿ ಪ್ರಶ್ನಿಸಿದರು.ಕೇಂದ್ರ ಸರ್ಕಾರದ ನಿರ್ಧಾರವು ಅಕ್ರಮವಾಗಿದೆ. ಇದರಿಂದ ದೇಶಾದ್ಯಂತ ಜನರಿಗೆ ತೀವ್ರ ತೊಂದರೆಯಾಗಿದೆ. ನೋಟು ಅಮಾನ್ಯಗೊಳಿಸುವುದಕ್ಕೆ ಮುನ್ನವೇ ತಮಗೆ ಬೇಕಾದವರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಆಪಾದಿಸಿದರು.  ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರವು ಯಾವುದೇ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ದಿಢೀರ್ ನಿರ್ಧಾರ ಕೈಗೊಂಡಿದೆ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಉತ್ತರಿಸಬೇಕಾದ ಪ್ರಧಾನಿ ಮತ್ತು ಹಣಕಾಸು ಸಚಿವರೇ ಗೈರು ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಇತರ ಪ್ರತಿಪಕ್ಷಗಳ ಸದಸ್ಯರು ದನಿಗೂಡಿಸಿದರು.

 
ಸರ್ಕಾರದ ಪರವಾಗಿ ಉತ್ತರ ನೀಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ಎಲ್ಲ ವಿಷಯಗಳ ಬಗ್ಗೆ ಉತ್ತರ ನೀಡಲು ಸರ್ಕಾರ ಸಿದ್ದವಿದೆ. ಪ್ರಧಾನಿ ಮತ್ತು ಹಣಕಾಸು ಸಚಿವರು ಉತ್ತರ ನೀಡುತ್ತಾರೆ ಎಂದು ಸಮಜಾಯಿಷಿ ನೀಡಿ ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಇದಕ್ಕೆ ಒಪ್ಪದ ವಿಪಕ್ಷ ಸದಸ್ಯರು ಏರುದನಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದಿರುವ ಬಾವಿಗಿಳಿದು ಧರಣಿ ನಡೆಸಿದರು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಯತ್ನಿಸಿದರು. ಆದರೆ ಕೋಲಾಹಲ ಮತ್ತು ಗದ್ದಲ ಮುಂದುವರೆದ ಕಾರಣ ಲೋಕಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.

 

ರಾಜ್ಯಸಭೆಯಲ್ಲೂ ಕೋಲಾಹಲ: ಮೇಲ್ಮನೆಯಲ್ಲೂ ಕೂಡ ಇದೇ ವಿಷಯ ಪ್ರಸ್ತಾಪವಾಗಿ ಪ್ರತಿಪಕ್ಷದ ಸದಸ್ಯರು ಪ್ರಧಾನಿಗಳಿಂದ ಉತ್ತರ ಬಯಸಿದರು. ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದ ಕಾರಣ ಉಪಸಭಾಪತಿ ಪಿ.ಕೆ.ಕುರಿಯನ್ ಮೂರು ಬಾರಿ ಸದನವನ್ನು ಮುಂದೂಡಬೇಕಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin