ನೋಟು ನಿಷೇಧದಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ರೈತರಿಗೆ ತೊಂದರೆ : ಸಿಎಂ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

siddu

ಬೆಂಗಳೂರು, ನ.18- ನೋಟುಗಳ ನಿಷೇಧಕ್ಕೂ ಮುನ್ನ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಇರುವುದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ರೈತರು ತೊಂದರೆಗೀಡಾಗುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಹಕಾರ ಸಂಘಗಳಲ್ಲಿ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಸಾಲ ಮರು ಪಾವತಿಸ ಬೇಕಾದ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಖಾಸಗಿ ಆಸ್ಪತ್ರೆಗಳಲ್ಲೂ ಹಳೆಯ ನೋಟುಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಹಳೆಯ ನೋಟುಗಳನ್ನು ಪಡೆಯುವಂತೆ ಸಲಹೆ ಮಾಡಬಹುದಷ್ಟೆ. ಆದರೆ ಆ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2,000 ರೂ. ನೋಟಿನಿಂದಾಗಿ ಜನರ ಬವಣೆ ತೀರುತ್ತಿಲ್ಲ. 100 ರೂ.ಗಳ ಸಾಮಾನು ಖರೀದಿಸಿ ಎಲ್ಲರೂ 2,000 ರೂ. ನೀಡುತ್ತಿದ್ದಾರೆ. ಬಾಕಿ 1,900 ರೂ. ಚಿಲ್ಲರೆ ನೀಡಲು ವರ್ತಕರು ಪರದಾಟುತ್ತಿದ್ದಾರೆ. ಇದರಿಂದ ವ್ಯಾಪರ ವಹಿವಾಟು ಕುಂಠಿತವಾಗಿದೆ. ಮೊದಲು 500 ರೂ.ಗಳ ನೋಟುಗಳನ್ನು ಬಿಡುಗಡೆ ಮಾಡಿ ನಂತರ ಹಳೆಯ ನೋಟುಗಳನ್ನು ನಿಷೇಸಬೇಕಿತ್ತು ಎಂದು ಹೇಳಿದರು.
ಜನಸಾಮಾನ್ಯರು ಎದುರಿ ಸುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇದುವರೆಗೂ ಅವರಿಂದ ಉತ್ತರ ಬರೆದಿಲ್ಲ. ದೇಶದಲ್ಲಿ 2.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಜನಸಾಮಾನ್ಯರ ಬಳಿ ಸಾಮಾನ್ಯವಾಗಿ ಇಷ್ಟು ಮೊತ್ತದ ಹಣ ಮನೆಯಲ್ಲಿ ಸಂಗ್ರಹ ಇರುತ್ತದೆ. ಈಗ ಅದನ್ನು ಬದಲಾವಣೆ ಮಾಡಲು ತೊಂದರೆ ಎದುರಾಗಿದೆ. ಜತೆಗೆ ಆತಂಕವೂ ಇದೆ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಮನಿಸಬೇಕಿದೆ ಎಂದರು.  ಸಂಸತ್‍ನ ಉಭಯ ಸದನಗಳಲ್ಲಿ ಈ ಕುರಿತಂತೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಯಾವ ಉತ್ತರ ನೀಡುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇವೆ.  ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕನಕ ಜಯಂತಿಯಂದು ಸರ್ಕಾರಿ ರಜೆ ಇದ್ದರೂ ಬ್ಯಾಂಕ್‍ಗಳ ರಜೆಯನ್ನು ರದ್ದುಗೊಳಿಸಿದ್ದೆ ಎಂದು ತಿಳಿಸಿದರು. ಹಳೆಯ ನೋಟುಗಳ ನಿಷೇಧ ವನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಬಿಂಬಿಸಲಾಗುತ್ತಿದೆ. ಇದು ಹೊಸ ಕ್ರಮವಲ್ಲ, ಹಿಂದೆ ಮೋರಾರ್ಜಿ ದೇಶಾಯಿ ಹಣಕಾಸು ಸಚಿವರಾಗಿದ್ದಾಗ ಮತ್ತು ಇನ್ನೂ ಹಲವು ಬಾರಿ ನೋಟುಗಳನ್ನು ನಿಷೇಧ ಮಾಡಲಾಗಿದೆ ಎಂದು ಅವರು ಹೇಳಿದರು.

► Follow us on –  Facebook / Twitter  / Google+

 

Facebook Comments

Sri Raghav

Admin