ಪೊಲೀಸರ ಭತ್ಯೆ ಹೆಚ್ಚಳ, ಡಿಸೆಂಬರ್’ನಿಂದ ವಾರಕ್ಕೊಂದು ರಜೆ : ಮುಂದಿನ ವರ್ಷ ವೇತನ ಸಮಿತಿ ರಚನೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah

ಬೆಂಗಳೂರು, ನ.18- ಪೊಲೀಸರ ವೇತನ ಪರಿಷ್ಕರಣೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಪ್ರತಿ ತಿಂಗಳು ಎರಡು ಸಾವಿರ ರೂ. ಭತ್ಯೆಯನ್ನು ಹೆಚ್ಚಳ ಮಾಡಿದ್ದು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮುಂದಿನ ವರ್ಷ ವೇತನ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಸಚಿವ ಪರಮೇಶ್ವರ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರ ಸಮಸ್ಯೆಗಳು ಮತ್ತು ವೇತನ ತಾರತಮ್ಯ ಕುರಿತು ಅಧ್ಯಯನ ನಡೆಸಲು ಈ ಮೊದಲು ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಸೆಪ್ಟೆಂಬರ್ನಲ್ಲಿ ವರದಿ ನೀಡಿದ್ದು, ನೆರೆ ರಾಜ್ಯ ಹಾಗೂ ಕರ್ನಾಟಕ ಪೊಲೀಸರ ವೇತನದಲ್ಲಿ ತಾರತಮ್ಯವಿದೆ ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ನೇರವಾಗಿ ವೇತನ ಹೆಚ್ಚಳ ಮಾಡಲು ಬರುವುದಿಲ್ಲ. ಹೀಗಾಗಿ ನೇರವಾಗಿ ಪೊಲೀಸರ ವೇತನ ಹೆಚ್ಚಳ ಮಾಡುತ್ತಿಲ್ಲ. ಬದಲಾಗಿ ಮುಂದಿನ ವರ್ಷ ವೇತನ ಪರಿಷ್ಕರಣೆಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗುವುದು. ಆವರೆಗೂ ತಾತ್ಕಾಲಿಕ ಪರಿಹಾರವಾಗಿ ಪೊಲೀಸರ ಭತ್ಯೆಗಳಲ್ಲಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಈಗ ಪಡೆಯುತ್ತಿರುವ ವೇತನದ ಜೊತೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಹೆಚ್ಚುವರಿ ಭತ್ಯೆ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 200ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ಹೇಳಿದರು.

ಸಮವಸ್ತ್ರ ಭತ್ಯೆ ಪ್ರಸ್ತುತ 100ರೂ ಇದ್ದು ಅದನ್ನು 500ರೂ.ಗಳಿಗೆ ಹೆಚ್ಚಿಸಲಾಗಿದೆ. ಕನ್ವೆನ್ಷನ್ ಅಲಯನ್ಸ್ ಎಂಬ ಹೊಸ ಭತ್ಯೆಯನ್ನು ಜಾರಿಗೆ ತರಲಾಗುತ್ತಿದ್ದು ತಿಂಗಳಿಗೆ 600ರೂ. ನೀಡಲಾಗುವುದು. ಹಾರ್ಡ್ಶಿಫ್ ಅಲೆಯನ್ಸ್ಯೆಂದು (ಕಷ್ಟದ ಕೆಲಸಗಳಿಗೆ) ಒಂದು ಸಾವಿರ ರೂ.ಗಳನ್ನು ಹೆಚ್ಚಿಸಲಾಗುತ್ತದೆ ಎಂದರು. ಭತ್ಯೆ ಹೆಚ್ಚಳದಿಂದ ಕಾನ್ಸ್ಟೆಬಲ್ರಿಂದ ಪಿಎಸ್ಐಗಳವರೆಗೂ ಪ್ರತಿ ತಿಂಗಳು ಎರಡು ಸಾವಿರ ರೂ. ಹೆಚ್ಚುವರಿ ಹಣ ಸಿಗಲಿದೆ. ಶೇ.90ರಷ್ಟು ಪೊಲೀಸ್ ಸಿಬ್ಬಂದಿಗಳಿಗೆ ಇದು ಅನ್ವಯವಾಗಲಿದೆ. ಡಿ.1ರಿಂದ ಭತ್ಯೆ ಪರಿಷ್ಕರಣೆ ಜಾರಿಯಾಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 90 ಸಾವಿರ ಪೊಲೀಸರಿದ್ದು, ಬಹುತೇಕ ಮಂದಿ ಇದರ ಸೌಲಭ್ಯ ಪಡೆಯಲಿದ್ದಾರೆ. ಪೊಲೀಸರಿಗೆ ವರ್ಷಕ್ಕೆ 12ರ ಬದಲಾಗಿ 13 ತಿಂಗಳ ವೇತನ ನೀಡಲಾಗುತ್ತಿದೆ. ವಾರದ ರಜೆ ಕಡ್ಡಾಯವಾಗಿ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

CM-Siddaramaiah-1

ಬಡ್ತಿಗೆ ಹೊಸ ನಿಯಮಾವಳಿ:

ಇಂದಿನ ವ್ಯವಸ್ಥೆಯಲ್ಲಿ ಪೊಲೀಸರು ಬಡ್ತಿ ಪಡೆಯಲು ಸುಮಾರು 23 ವರ್ಷ ಕಾಲಾವಕಾಶ ಹಿಡಿಯುತ್ತಿದೆ. ಇದರಿಂದಾಗಿ ಪೊಲೀಸರು ಕಾನ್ಸ್ಟೆಬಲ್ನಿಂದ ನಿವೃತ್ತರಾಗುವ ವೇಳೆಗೆ ಮುಖ್ಯಪೇದೆ ಹುದ್ದೆ ಪಡೆಯುವುದೇ ದೊಡ್ಡ ಸವಾಲಾಗಿದೆ. ಬಡ್ತಿ ನಿಯಮಾವಳಿಗಳನ್ನು ಸರಳೀಕರಣಗೊಳಿಸಿ ಕನಿಷ್ಠ 10ರಿಂದ 12 ವರ್ಷಕ್ಕೊಮ್ಮೆ ಬಡ್ತಿ ಪಡೆಯಲು ಅನುಕೂಲವಾಗುವಂತೆ ಸಮಗ್ರ ಮುಂಬಡ್ತಿ ನಿಯಮಾವಳಿಗಳನ್ನು ರೂಪಿಸಲಾಗುವುದು, ಇದರಿಂದ ಕಾನ್ಸ್ಟೇಬಲ್ ಆಗಿದ್ದವರು ಸಬ್ಇನ್ಸ್ಪೆಕ್ಟರ್ ಹುದ್ದೆಗೇರುವ ಅವಕಾಶವಿದೆ. ಪೊಲೀಸ್ ಮ್ಯಾನ್ಯುಯಲ್ 862ರ ಪ್ರಕಾರ ಜಾರಿಯಲ್ಲಿದ್ದ ಅಡರ್ಲಿ ಪದ್ಧತಿಯನ್ನು ರದ್ದುಗೊಳಿಸಲಾಗಿದೆ. ಅಡರ್ಲಿಗಳಾಗಿ ಕೆಲಸ ಮಾಡುತ್ತಿರುವರು ಕಾನ್ಸ್ಟೆಬಲ್ಗಳಿಗೆ ಪೊಲೀಸ್ ತರಬೇತಿ ಪಡೆದಿರುತ್ತಾರೆ. ಅವರನ್ನು ಪೂರ್ಣ ಪ್ರಮಾಣದ ಪೊಲೀಸ್ ಸೇವೆಗೆ ಬಳಸಿಕೊಳ್ಳಲಾಗುವುದು, ಅಡರ್ಲಿ ಪದ್ಧತಿಗೆ ಬದಲಾಗಿ ಒದಗಿಸಬೇಕಾದ ಬೇರೆ ಸಿಬ್ಬಂದಿಗಳನ್ನು ಒದಗಿಸುವ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

2 ವರ್ಷದಲ್ಲಿ ಎಲ್ಲಾ ಹುದ್ದೆ ಭರ್ತಿ:

ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನಿಗಿಸಲು ಆದ್ಯತೆ ನೀಡಲಾಗಿದೆ. 2018-19ರ ವೇಳೆಗೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ವರ್ಷ 711 ಪಿಎಸ್ಐ ಸೇರಿ 7815 ಪೊಲೀಸರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಈಗಾಗಲೇ 215 ಪಿಎಸ್ಐಗಳೂ ಸೇರಿ 6610 ಪೊಲೀಸರನ್ನು ನೇಮಿಸಲಾಗಿದೆ. 5ಸಾವಿರ ಕಾನ್ಸ್ಟೆಬಲ್ಗಳು ತರಬೇತಿ ಪಡೆಯುತ್ತಿದ್ದಾರೆ. 2017-18ಕ್ಕೆ 4516 ಕಾನ್ಸ್ಟೆಬಲ್ಗಳು, 336 ಪಿಎಸ್ಐಗಳು, 2018-19ಕ್ಕೆ 4045 ಕಾನ್ಸ್ಟೆಬಲ್ಗಳು, 112 ಪಿಎಸ್ಐಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ನೇಮಕಾತಿಗಳು ನಡೆಯಲಿದ್ದು, ಇನ್ನೇರಡು ವರ್ಷದಲ್ಲಿ ಯಾವ ಹುದ್ದೆಗಳು ಖಾಲಿ ಇಲ್ಲದಂತೆ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin