ಬಿಜೆಪಿ ಕಾರ್ಯಕರ್ತನ ಕೊಲೆಗೆ ಸುಪಾರಿ ಕೊಟ್ಟಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮತ್ತು ಪತ್ನಿ ಸೇರಿದಂತೆ 9 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Govindegowda

ಬೆಂಗಳೂರು, ನ.18- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಫಾರಿಕೊಟ್ಟು ಬಿಜೆಪಿ ಕಾರ್ಯಕರ್ತ ನನ್ನು ಕೊಲೆ ಮಾಡಿಸಿದ್ದ ಮಾಜಿ ಕಾರ್ಪೊರೇಟರ್ ದಂಪತಿ ಸೇರಿದಂತೆ 9 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗ್ಗನಹಳ್ಳಿಯ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ (58), ಇವರ ಪತ್ನಿ ವರಮಹಾಲಕ್ಷ್ಮಿ (47) ಹಾಗೂ ಮಣಿಕಂಠ, ಹರೀಶ್, ಮಣಿಕಂಠ ಅಲಿಯಾಸ್ ಯೋಗೇಶ್, ಸುರೇಶ್, ಮ್ಯಾಥ್ಯೂ, ಸನಾವುಲ್ಲ ಮತ್ತು ಯುವರಾಜ ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ಗಳು, ದ್ವಿಚಕ್ರವಾಹನಗಳು, ಆಯುಧಗಳು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

Govindegowda-01

ಜೆಡಿಎಸ್ನಲ್ಲಿದ್ದ ಚಿಕ್ಕತಿಮ್ಮೇಗೌಡ ಈ ಹಿಂದಿನ ಚುನಾವಣೆಗಳಲ್ಲಿ ಗೋವಿಂದೇಗೌಡ ಮತ್ತು ವರಮಹಾಲಕ್ಷ್ಮಿ ಪರವಾಗಿ ಪ್ರಚಾರ ಮಾಡಿದ್ದು, ತದನಂತರ ಇವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರಿ ಸಕ್ರಿಯ ಕಾರ್ಯಕರ್ತರಾಗಿದ್ದರು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಚಿಕ್ಕತಿಮ್ಮೇಗೌಡ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರಿಂದ ವರಮಹಾಲಕ್ಷ್ಮಿ ಅವರು ಚುನಾವಣೆಯಲ್ಲಿ ಪರಭಾವಗೊಂಡಿದ್ದರು. ಅಲ್ಲದೆ ವರಮಹಾಲಕ್ಷ್ಮಿ ಅವರ ಅಕ್ಕನ ಮಗ ಸುರೇಶ್ಕುಮಾರನು ಸಹ ಇವರಿಗೆ ಹಣಕಾಸು ವ್ಯವಹಾರದಲ್ಲಿ ಕೋಟಿ ರೂ.ನಷ್ಟು ಮೋಸ ಮಾಡಿದ್ದನು ಎನ್ನಲಾಗಿದ್ದು, ಇತ್ತೀಚೆಗೆ ಈತ ಚಿಕ್ಕತಿಮ್ಮೇಗೌಡನ ಜತೆ ಸೇರಿಕೊಂಡಿದ್ದರಿಂದ ಇವರಿಬ್ಬರು ಒಂದಾದರೆ ಮುಂದೆ ನಮ್ಮನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಮುಗಿಸಿಬಿಡುತ್ತಾರೆ ಎಂಬ ವೈಯಕ್ತಿಕ ದ್ವೇಷ ಸಾಧಿಸಿ ಚಿಕ್ಕತಿಮ್ಮೇಗೌಡನ ಕೊಲೆಗೆ ಸಂಚು ರೂಪಿಸಿ ಸುರೇಶ್ ಹಾಗೂ ಇತರೆ ಆರೋಪಿಗಳಿಗೆ 30 ಲಕ್ಷ ರೂ. ಸುಫಾರಿ ನೀಡಿದ್ದಾರೆ.

Govindegowda-02

ನ.8ರಂದು ರಾತ್ರಿ 9.20ರಲ್ಲಿ ಸುಂಕದಕಟ್ಟೆಯ ಗಜಾನನಗರದ 2ನೇ ಮುಖ್ಯರಸ್ತೆಯಲ್ಲಿ ಚಿಕ್ಕತಿಮ್ಮೇಗೌಡ ಅವರು ನಾಗಣ್ಣ ಎಂಬುವರ ಜತೆ ದ್ವಿಚಕ್ರವಾನದಲ್ಲಿ ಹೋಗುತ್ತಿದ್ದಾಗ ಇವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಚಿಕ್ಕತಿಮ್ಮೇಗೌಡ ಅವರ ಭಾಮೈದ ರಾಜಶೇಖರ್ ಎಂಬುವರು ಗೋವಿಂದೇಗೌಡ ದಂಪತಿ ಮೇಲೆ ಅನುಮಾನ ವ್ಯಕ್ತಪಡಿಸಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಪತ್ತೆ ಮಾಡಲು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಅನುಚೇತ್, ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವೇಣುಗೋಪಾಲ ಅವರ ನೇತೃತ್ವದಲ್ಲಿ 6ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ನೇಮಕ ಮಾಡಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿ ಗೋವಿಂದೇಗೌಡ ದಂಪತಿ ಸೇರಿದಂತೆ 9ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಲೆಗೆ ಮೊದಲು 5 ಲಕ್ಷ ಮುಂಗಡ ಹಣ ನೀಡಿ ತದನಂತರ 10 ಲಕ್ಷ ರೂ. ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin