ಸುಂದರ ಬೆಂಗಳೂರಿಗೆ ಕಳಂಕ ಬರಲು ಜಲಮಂಡಳಿಯ ಕಾರ್ಯ ವೈಖರಿ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

water-board

ಬೆಂಗಳೂರು, ನ.18- ಸುಂದರ ಬೆಂಗಳೂರಿಗೆ ಕಳಂಕ ಬರಲು ಬೆಂಗಳೂರು ಜಲಮಂಡಳಿಯವರ ಕಾರ್ಯ ವೈಖರಿ ಕಾರಣ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ದೂರಿದರು.  ಬರುವ ಬೇಸಿಗೆ ಹಿನ್ನೆಲೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಬಿಬಿಎಂಪಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ನಗರಕ್ಕೆ ಸುಂದರ ಬೆಂಗಳೂರು ಎಂಬ ಹೆಸರಿತ್ತು. ಈ ಹೆಸರಿಗೆ ಕಳಂಕ ಬರಲು ಬಿಡಬ್ಲ್ಯೂಎಸ್‍ಎಸ್‍ಬಿ ಕಾರಣ ಎಂದು ದೂರಿದರು.

ಜಲಮಂಡಳಿಯ ಇಂಜಿನಿಯರ್‍ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಇಲಾಖೆಯ ವಾಟರ್‍ಮೆನ್ ಹಾಗೂ ಮೀಟರ್ ರೀಡರ್‍ಗಳು ಇಂಜಿನಿಯರ್‍ಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.  ಎಲ್‍ಎನ್‍ಟಿ ಸಂಸ್ಥೆಯವರು ಮನಬಂದಂತೆ ರಸ್ತೆ ಅಗೆದಿದ್ದಾರೆ. ನೀರಿನ ಪೈಪ್ ಒಡೆದಿದ್ದಾರೆ. ಕುಡಿಯುವ ನೀರಿನ ಪೈಪ್ ಲೀಕ್ ಆಗುತ್ತಿವೆ. ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ, ಬೇಸಿಗೆ ಬಂದರೆ ನೀರಿಗೆ ಹಾಹಾಕಾರ ಹೆಚ್ಚಾಗುತ್ತದೆ. ಇದರ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರ, ಕಾವೇರಿ ಜಲಾಶಯಲ್ಲಿ ನೀರಿನ ಮಟ್ಟ ಎಷ್ಟಿದೆ. ನಗರದ ಕುಡಿಯುವ ನೀರಿನ ಪಾಲು ಎಷ್ಟು, ನೀರಿನ ಸಮಸ್ಯೆ ಪರಿಹರಿಸಲು ಏನು ಕ್ರಮ ಕೈಗೊಂಡಿದೀರಿ ಎಂಬುದನ್ನು ವಿವರಿಸಿ ಎಂದು ಒತ್ತಾಯಿಸಿದರು.

ಬೆಂಗಳೂರಿಗೆ ಕಾವೇರಿ ನೀರು ಬಂದರೂ ಕುಡಿಯುವ ನೀರಿನ ಅಭಾವ ತಪ್ಪಿಸುತ್ತಿರುವುದು ಬೋರ್‍ವೆಲ್‍ಗಳೆ. ಅದೃಷ್ಟವಶಾತ್ ನಮ್ಮಲ್ಲಿ ಅಂತರ್ಜಲ ಬತ್ತಿಲ್ಲ. ಆದರೆ ಕೆಟ್ಟ ಹೋಗಿರುವ ಬೋರ್‍ವೆಲ್‍ಗಳ ದುರಸ್ತಿ ಮಾಡಲು ಜಲಮಂಡಳಿ ಬಿಬಿಎಂಪಿ ಇಂಜಿನಿಯರ್‍ಗಳಿಗೆ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಬೋರ್‍ವೆಲ್ ಕೆಟ್ಟಿವೆ ರಿಪೇರಿ ಮಾಡಿಸಿ ಎಂದು ಇಂಜಿನಿಯರ್‍ಗಳಿಗೆ ಹೇಳವ ಬದಲು ಎಮ್ಮೆಗಳಿಗೆ ಹೇಳೋದು ವಾಸಿ. 198 ವಾರ್ಡ್‍ಗಳ ಬೋರ್‍ವೆಲ್‍ಗಳ ದುರಸ್ಥಿಯ ಸಂಪೂರ್ಣ ಹೊಣೆಯನ್ನು ಜಲಮಂಡಳಿಗೆ ವಹಿಸುವುದು ಸೂಕ್ತ ಎಂದು ಪದ್ಮನಾಭ ರೆಡ್ಡಿ ಸಲಹೆ ನೀಡಿದರು.  ಕುಡಿಯುವ ನೀರಿನ ಲೀಕೇಜ್‍ನಿಂದ ಸಾಕಷ್ಟು ತೊಂದರೆ ಆಗುತ್ತಿದೆ. ತೊಂದರೆ ತಪ್ಪಿಸುವುದರ ಜತೆಗೆ ಸಾರ್ವಜನಿಕರಗೆ ಕುಡಿಯುವ ನೀರನ್ನು ರಕ್ಷಿಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು. 20 ಮನೆಗಳುಳ್ಳ ವಸತಿ ಸಮುಚ್ಚಯ ಗಳವರು ತ್ಯಾಜ್ಯ ನೀರು ಸಂಸ್ಕರಣೆ ಘಟಕ ಅಳವಡಿಸಿ ಕೊಳ್ಳಲು ಆದೇಶ ಮಾಡಿದ್ದೀರಿ ಆದರೆ ಅವರು ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ 50 ಮನೆಗಳಿರುವ ಸಮುಚ್ಚಗಳವರು ಈ ಘಟಕವನ್ನು ಅಳವಡಿಸಿಕೊಳ್ಳುವಂತೆ ಕಡ್ಡಾಯ ಮಾಡಿ ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ಮಾಜಿ ನಾಯಕ ಸತ್ಯ ನಾರಾಯಣ ಮಾತನಾಡಿ, ಇನ್ನು ಮುಂದೆ 20 ಫ್ಲಾಟ್‍ಗಳಿರುವ ಅಪಾರ್ಟ್‍ಮೆಂಟ್ ಕಟ್ಟುವವರಿಗೆ ಒಸಿ,ಸಿಸಿ ಕೊಡುವ ಸಂದರ್ಭದಲ್ಲೇ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳಲು ಕಡ್ಡಾಯ ಮಾಡಿ ಎಂದು ಸಲಹೆ ನೀಡಿದರು. ಜೆಡಿಎಸ್ ಗುಂಪಿನ ನಾಯಕಿ ರಮೀಳಾ ಉಮಾಶಂಕರ್, ಸದಸ್ಯರಾದ ಸಂಪತ್‍ರಾಜು, ಆಂಜನಪ್ಪ ಸೇರಿದಂತೆ ಬಹುತೇಕ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್‍ಗಳ ಕುಡಿಯುವ ನೀರಿನ ಸಮಸ್ಯೆ, ಜಲಮಂಡಳಿ ಅಕಾರಿಗಳ ಬೇಜವಾಬ್ದಾರಿತನ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ಸೆಳೆದರು.

► Follow us on –  Facebook / Twitter  / Google+

Facebook Comments

Sri Raghav

Admin