10 ದಿನಗಳ ಕಳೆದರೂ ನೋಟಿಗಾಗಿ ನಿಂತಿಲ್ಲ ಜನರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Bank-Notes

ಬೆಂಗಳೂರು, ನ.18- ಹತ್ತು ದಿನ ಕಳೆದರೂ ನೋಟುಗಳ ಬವಣೆ ತಪ್ಪುತ್ತಿಲ್ಲ. 500, 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪರದಾಟ ಮುಂದುವರಿದಿದೆ. ಬ್ಯಾಂಕ್, ಎಟಿಎಂಗಳ ಮುಂದೆ ಗ್ರಾಹಕರ ರಶ್ ಹೆಚ್ಚಾಗಿಯೇ ಇದೆ. ಕೈಗೆ ಸಿಕ್ಕ 2000ರೂ.ನ ಹೊಸ ನೋಟುಗಳು ವಿನಿಮಯವಾಗದೆ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಎಟಿಎಂಗಳಲ್ಲಿ, ಬ್ಯಾಂಕ್‍ಗಳಲ್ಲಿ 100, 50ರ ನೋಟುಗಳು ಸಿಗುತ್ತಿಲ್ಲ. ಬದಲಾಗಿ 2000ರೂ. ಮುಖಬೆಲೆಯ ಹೊಸ ನೋಟು ಮಾತ್ರ ಸಿಗುತ್ತಿದೆ. ಈ ಹಣ ಪಡೆದವರು ಚಲಾವಣೆ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ನೋಟು ಬದಲಾವಣೆ ಹಾಗೂ ಎಟಿಎಂನಿಂದ ಹಣ ಪಡೆಯುವ ಪ್ರಮಾಣವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.

ಪ್ರತಿದಿನ 4500ರೂ. ಇದ್ದ ಹಣ ಬದಲಾವಣೆ ಪ್ರಮಾಣವನ್ನು 2000ಕ್ಕೆ ಇಳಿಸಿದ್ದು, ಎಟಿಎಂನಲ್ಲಿ ಹಣ ಪಡೆಯಲು ಇದ್ದ 2500ರೂ. ಪ್ರಮಾಣವನ್ನು 2000ಕ್ಕೆ ಇಳಿಸಿದೆ. ಪೆಟ್ರೋಲ್ ಬಂಕ್‍ಗಳಲ್ಲಿ ಹಣ ಪಡೆಯಬಹುದಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾಕಷ್ಟು ಜನ ಪೆಟ್ರೋಲ್ ಬಂಕ್‍ಗಳಿಗೆ ಹೋದರು. ಆದರೆ, ಬಂಕ್ ಮಾಲೀಕರು ನಮಗೆ ಯಾವುದೇ ಆದೇಶ ಬಂದಿಲ್ಲ. ನಮ್ಮಲ್ಲಿ ಯಾವುದೇ ನೋಟು ಬದಲಾವಣೆ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ನಿರಾಶರಾದ ಗ್ರಾಹಕರು ಹಿಂದಿರುಗಿದ್ದಾರೆ. ಅಲ್ಲದೆ, ಪೆಟ್ರೋಲ್ ಬಂಕ್‍ಗಳು ಹೊಸ ನೋಟುಗಳನ್ನು ಪಡೆದು ಚಿಲ್ಲರೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ.

ರದ್ದಾಗಿರುವ ನೋಟುಗಳನ್ನು ಪೆಟ್ರೋಲ್‍ಬಂಕ್‍ಗಳಲ್ಲಿ ಸ್ವೀಕರಿಸುತ್ತಿದ್ದರೂ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ. ಚಿಲ್ಲರೆ ಸಮಸ್ಯೆಯಿಂದ ಫುಟ್‍ಪಾತ್ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಆಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು ಬಣಬಣ ಎನ್ನುತ್ತಿವೆ. ಹೊಟೇಲ್, ಬಾರ್‍ಗಳಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿ ವ್ಯಾಪಾರ-ವಹಿವಾಟು ಕುಸಿದಿದೆ.
ಅಂಚೆ ಕಚೇರಿ, ಬ್ಯಾಂಕ್, ಎಟಿಎಂಗಳಲ್ಲಿ ಹಣ ಠೇವಣಿ ಮಾಡುವವರು, ಹಣ ಪಡೆಯುವವರು ಬೆಳಗ್ಗೆಯಿಂದಲೇ ಕ್ಯೂ ನಿಂತಿದ್ದರೂ ಕೆಲವೆಡೆ ಎಟಿಎಂಗಳು ಕೈ ಕೊಟ್ಟಿದ್ದವು. ಬ್ಯಾಂಕ್‍ಗಳಲ್ಲಿ ಕ್ಯಾಷ್ ಇಲ್ಲದೆ ಸಮಸ್ಯೆಯಾಗಿದ್ದು ಕಂಡುಬಂತು.

ಬೆರಳಿಗೆ ಶಾಯಿ ಹಾಕುತ್ತಿರುವುದರಿಂದ ಹಲವೆಡೆ ವಿಳಂಬವಾಯಿತು. ಟೋಲ್ ಸಂಗ್ರಹವನ್ನು ನ.24ರ ವರೆಗೆ ರದ್ದುಗೊಳಿಸಿರುವುದರಿಂದ ಟೋಲ್‍ನಲ್ಲಿ ಯಾವುದೇ ಫಜೀತಿ ಇಲ್ಲದೆ ವಾಹನಗಳ ಸಂಚಾರ ಸುಗಮವಾಗಿತ್ತಾದರೂ ನೋಟು ನಿಷೇಧದಿಂದ ಸರುಕು-ಸಾಗಾಣಿಕೆ ಮೇಲೆ ಭಾರೀ ಪರಿಣಾಮ ಬೀರಿದ್ದರಿಂದ ಬಹುತೇಕ ಲಾರಿಗಳ ಸಂಚಾರ ಸ್ಥಗಿತಗೊಂಡಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin