ಹೃದಯಾಘಾತವಾದರೂ ಪ್ರಯಾಣಿಕರ ರಕ್ಷಿಸಿದ್ದ ಬಸ್ ಚಾಲಕ ಕೃಷ್ಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Turuvekere

ತುರುವೇಕೆರೆ, ನ.20- ಸಾರಿಗೆ ಬಸ್ ಚಾಲಕ ತನ್ನ ಪ್ರಾಣ ಹೋಗುವ ಮುನ್ನ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ತನ್ನ ಕರ್ತವ್ಯ ಮೆರೆದು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ದೇವಿಹಳ್ಳಿ ಗೇಟ್ ಬಳಿ ನಡೆದಿದೆ. ತಾಲೂಕಿನ ಆರಳಿಕೆರೆ ಪಾಳ್ಯದ ಕೃಷ್ಣ (36) ಮೃತ ಚಾಲಕ. ಕೃಷ್ಣ ತುರುವೇಕೆರೆ ಘಟಕದಲ್ಲಿ ಚಾಲಕರಾಗಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಗ್ಗೆ ಕೆಲಸಕ್ಕೆ ಹಾಜರಾದ ಅವರು ತುರುವೇಕೆರೆಯಿಂದ ಬೆನಕನಕೆರೆಗೆ ತೆರಳಿ ಮತ್ತೆ ಪಟ್ಟಣಕ್ಕೆ ಬಸ್ ಚಾಲನೆ ಮಾಡಿಕೊಂಡು ವಾಪಸ್ ಬರುವಾಗ ದೇವಿಹಳ್ಳಿ ಗೇಟ್ ಬಳಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್‍ನ್ನು ನಿಧಾನವಾಗಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ನಂತರ ಕುಸಿದಿದ್ದಾರೆ. ತಕ್ಷಣ ನಿರ್ವಾಹಕ ಹಾಗೂ ಪ್ರಯಾಣಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮೃತಪಟ್ಟಿದ್ದಾರೆ. ಬಸ್‍ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಮೃತನು ಓರ್ವ ಪತ್ನಿ ಹಾಗೂ 4 ವರ್ಷ ಮತ್ತು 2 ವರ್ಷದ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ನೊಣವಿಕರೆ ಜಿಪಂ ಸದಸ್ಯ ಮೈಲಾರಿ, ಬಿಜೆಪಿ ತಾಲೂಕು ಅಧ್ಯಕ್ಷ ಮಸಾಲ ಜಯರಾಮ್, ಬಿಜೆಪಿ ಮುಖಂಡ ಅರಳಿಕೆರೆ ರವಿಕುಮಾರ್, ಕೆಎಸ್‍ಆರ್‍ಟಿಸಿ ಡಿಪೋ ಮ್ಯಾನೇಜರ್ ತುಳಸಿರಾಮ್ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin