ದ್ವಿತೀಯ ಟೆಸ್ಟ್ ನಲ್ಲಿ ಭಾರತಕ್ಕೆ 246 ರನ್‍ಗಳ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Cricket-001

ವಿಶಾಖಪಟ್ಟಣ, ನ.21- ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ನಲ್ಲಿ 246 ರನ್‍ಗಳ ಹೀನಾಯ ಸೋಲು ಅನುಭವಿಸಿದೆ. ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಇಲ್ಲಿನ ಡಾ.ವೈ.ಆರ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ನಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕೊನೆಯ ದಿನದಾಟದಲ್ಲಿ ವಿರಾಟ ಕೊಹ್ಲಿ ಸಾರಥ್ಯದಲ್ಲಿ ಬೌಲರ್‍ಗಳು ನಡೆಸಿದ ಸಾಂಘಿಕ ಹೋರಾಟಕ್ಕೆ ಯಶಸ್ಸು ಸಿಕ್ಕಿ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‍ನ್ನು 158 ರನ್‍ಗಳಿಗೆ ಸರ್ವ ಪತನಗೊಂಡು ಭಾರತದಲ್ಲಿ ಭಾರೀ ಅಂತರದಲ್ಲಿ ಸೋಲು ಅನುಭವಿಸಿದೆ. ನಿನ್ನೆ ದಿನದಾಟಕ್ಕೆ ಎರಡು ವಿಕೆಟ್ ಕಳೆದುಕೊಂಡು 89 ರನ್ ಮಾಡಿ ಕೊನೆಯ ದಿನ ತಾಳ್ಮೆಯ ಆಟಕ್ಕೆ ತಂತ್ರ ರೂಪಿಸಿದ್ದ ಇಂಗ್ಲೆಂಡ್ ನಾಯಕ ಕುಕ್ ಅವರ ಎಲ್ಲಾ ಲೆಕ್ಕಾಚಾರಗಳು ಇಂದು ತಲೆಕೆಳಗಾದವು.

ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಜೋರೂಟ್ ಮತ್ತು ಡೂಕೆಟ್ ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರೂ ಅದಕ್ಕೆ ಅಶ್ವಿನ್ ಆಸ್ಪದ ಕೊಡಲಿಲ್ಲ. ಆರಂಭದಲ್ಲೇ ಈ ಜೋಡಿಯನ್ನು ಮುರಿಯಲು ಯಶಸ್ವಿಯಾಗಿ ಭಾರತಕ್ಕೆ ಗೆಲುವಿನ ಹುಮ್ಮಸ್ಸನ್ನು ಮೂಡಿಸಿದರು.  ನಂತರ ಬಂದ ಅನುಭವಿ ಆಟಗಾರ ಮೋಯಿನ್ ಆಲಿ ಕೂಡ ಕೇವಲ 2 ರನ್‍ಗಳಿಗೆ ರವೀಂದ್ರ ಜಡೇಜಾ ಅವರ ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದಾಗ ಇಂಗ್ಲೆಂಡ್ ಪಾಳಯದಲ್ಲಿ ಆತಂಕ ಶುರುವಾಯಿತು. ಕೇವಲ 15 ಓವರ್‍ಗಳಾಗುವಷ್ಟರಲ್ಲಿ 2 ವಿಕೆಟ್‍ಗಳು ಪತನಗೊಂಡ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಮತ್ತಷ್ಟು ಹುರುಪಿನಿಂದ ಗೆಲುವಿಗಾಗಿ ಹಾತೊರೆದಂತೆ ಕಂಡು ಬಂತು.
ಮೊದಲ ಇನ್ನಿಂಗ್ಸ್‍ನಲ್ಲಿ ಉತ್ತಮ ಆಟ ಪ್ರದರ್ಶಿಸಿ ಭರವಸೆ ಮೂಡಿಸಿದ್ದ ಸ್ಟ್ರೋಕ್ (6) ಮೈದಾನಕ್ಕಿಳಿದು ತಂಡವನ್ನು ಆಪತ್ತಿನಿಂದ ಪಾರು ಮಾಡಲು ಸಾಕಷ್ಟು ಪ್ರಯಾಸ ಪಟ್ಟರು.
ಭೋಜನ ವಿರಾಮಕ್ಕೆ ಬಿಡುವು ಸಿಗುವ ಮುನ್ನವೇ ಸ್ಟ್ರೋಕ್ ಅವರನ್ನು ಪೆವಿಲಿಯನ್‍ಗಟ್ಟುವಲ್ಲಿ ಪ್ರಥಮ ಟೆಸ್ಟ್ ಆಡುತ್ತಿರುವ ಜಯಂತ್ ಯಾದವ್ ಯಶಸ್ವಿಯಾದರು.
ಆಗ ತಂಡದ ಅರ್ಧ ಭಾಗದ ಆಟಗಾರರು ಪೆವಿಲಿಯನ್ ಸೇರುವಂತಾಯಿತು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಜ್‍ನಲ್ಲಿ ನೆಲೆಯೂರಿ ಆಡುತ್ತಿದ್ದ ಜೋರೂಟ್ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ ಇಂಗ್ಲೆಂಡ್ ತಂಡದ ಮೊತ್ತ 5 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿದಾಗ ಜೋರೂಟ್ (25) ಅವರನ್ನು ಮಹಮದ್ ಶಮಿ ಎಲ್‍ಬಿಡಬ್ಲ್ಯು ಕೆಡವಿದರು. ಆಗ ಭಾರತ ತಂಡದ ಆಟಗಾರರು ಕುಣಿದು ಕುಪ್ಪಳಿಸಿದರು. ಕೊನೆ ಗಳಿಕೆಯಲ್ಲಿ ಬೇರ್ ಸ್ಟೋ ಅವರು ಭಾರತದ ಬೌಲರ್‍ಗಳನ್ನು ಸ್ವಲ್ಪ ಹೊತ್ತು ಕಾಡಿ 34 ರನ್ ಗಳಿಸಿ ಬಿಟ್ಟರೆ, ಉಳಿದ ಬ್ಯಾಟ್‍ಮನ್ಸ್‍ಗಳು ಬೇಗನೆ ಔಟಾಗಿ ಸೋಲೊಪ್ಪಿಕೊಂಡರು. ಅದಿಲ್ ರಶೀದ್ (4), ಜಾಫರ್ ಅನ್ಸಾರಿ (0) , ಸ್ಟುವರ್ಡ್ ಬೋಟ್ (5) ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.

ಅಂತಿಮವಾಗಿ ಇಂಗ್ಲೆಂಡ್ 97.3 ಓವರ್‍ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 158 ರನ್‍ಗೆ ಆಲೌಟ್ ಆಗುವ ಮೂಲಕ 246 ರನ್‍ಗಳ ಹೀನಾಯ ಸೋಲು ಅನುಭವಿಸಿತು. ಭಾರತ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಲ್ ರೌಂಡರ್ ಅಶ್ವಿನ್ ಮತ್ತು ಜಯಂತ್ ಯಾದವ್ ತಲಾ 3 ವಿಕೆಟ್ ಕಬಳಿಸಿದರೆ, ಮಹಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಭಾರತದ ಗೆಲುವಿಗೆ ಶ್ರಮಿಸಿದರು. 3 ನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ನ. 26 ರಂದು ನಡೆಯಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin