ನೌಕಾಪಡೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ : INS ಚೆನ್ನೈ ಸಮರನೌಕೆ ಸೇವೆಗೆ ಸಮರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

INS-Chennai

ಮುಂಬೈ, ನ.21- ಪರಿಪೂರ್ಣ ಪ್ರಮಾಣದಲ್ಲಿ ಜಲಯುದ್ಧಗಳನ್ನು ಸಮರ್ಥವಾಗಿ ನಿರ್ವಹಿಸುವ ಐಎನ್‍ಎಸ್ ಚೆನ್ನೈ ಸಮರ ನೌಕೆಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಸೇವೆಗೆ ಸಮರ್ಪಿಸಿದ್ದಾರೆ. ಇದರೊಂದಿಗೆ ಭಾರತದ ನೌಕಾಪಡೆಯ ರಕ್ಷಣಾ ಬತ್ತಳಿಕೆಗೆ ಅತ್ಯಾಧುನಿಕ ಅಸ್ತ್ರವೊಂದು ಸೇರ್ಪಡೆಗೊಂಡಂತಾಗಿದೆ. ದೇಶೀಯವಾಗಿ ವಿನ್ಯಾಸಗೊಂಡು ನಿರ್ಮಾಣವಾಗಿರುವ ಇಂಡಿಯನ್ ನೇವಲ್ ಶಿಪ್ (ಐಎನ್‍ಎಸ್) ಚೆನ್ನೈ ನೌಕೆ 164 ಮೀಟರ್ ಉದ್ದ ಮತ್ತು 7,500 ಟನ್ ತೂಕ ಹೊಂದಿದೆ. ವೈರಿಗಳ ಕ್ಷಿಪಣಿ ನಾಶ ಸೇರಿದಂತೆ ಬಹುವಿಧ ಸಮರ ಕಾರ್ಯಾಚರಣೆಗಳನ್ನು ನಿಭಾಯಿಸುವಲ್ಲಿ ಸಮರ್ಥವಾಗಿದೆ.

ಈ ನೌಕೆಯಲ್ಲಿ ಭೂಮಿಯಿಂದ ಭೂಮಿಗೆ ಚಿಮ್ಮುವ ಸೂಪರ್‍ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಭೂಮಿಯಿಂದ ಗಗನಕ್ಕೆ ಹಾರುವ ಬರಾಕ್-8 ಕ್ಷಿಪಣಿಗಳಿವೆ. ಅಲ್ಲದೇ ಸಾಗರದ ಆಳದಲ್ಲಿ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶಪಡಿಸುವ ಅಸ್ತ್ರಗಳು, ಟಾರ್ಪೆಡೋ ಟ್ಯೂಬ್ ಲಾಂಚರ್‍ಗಳು, ರಾಕೆಟ್ ಲಾಂಚರ್‍ಗಳೊಂದಿಗೂ ಇದು ಸಜ್ಜಾಗಿದೆ. ಸಾಗರ ಪ್ರದೇಶಗಳ ಮೇಲೆ ಜಲಮಾರ್ಗ ಮತ್ತು ವಾಯುಮಾರ್ಗಗಳಿಂದ ನಡೆಯುವ ಎಲ್ಲ ರೀತಿ ಆಕ್ರಮಣಗಳನ್ನು ಎದರಿಸಲು ಐಎನ್‍ಎಸ್ ಚೆನ್ನೈ ಸಮರ್ಥವಾಗಿದೆ.  ಈ ನೌಕೆಯು ಪಶ್ಚಿಮ ನೇವಲ್ ಕಮ್ಯಾಂಡ್‍ನ ಫ್ಲಾಗ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ಅವರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin