ರಮೇಶ್‍ಜಾರಕಿಹೊಳಿ ಮಗನ ಮದುವೆಗೆ ಹೋಗಬೇಡಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarakihole

ಬೆಳಗಾವಿ, ನ.21- ದುಬಾರಿ ಮದುವೆಗಳಲ್ಲಿ ಭಾಗವಹಿಸುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ಸ್ವಪಕ್ಷದವರೇ ಆದರೂ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರ ಮಗನ ಮದುವೆಗೆ ಹೋಗುವುದಿಲ್ಲ. ನೀವು ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ನಡೆದ ಅಧಿವೇಶನಕ್ಕೂ ಮುನ್ನ ನಡೆದ ಸಚಿವ ಸಭೆಯ ನಂತರ ಈ ವಿಷಯ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ದುಬಾರಿ ಮದುವೆ ಕುರಿತು ನಾವೇ ಟೀಕಿಸಿ. ಈಗ ನಾವೇ ದುಬಾರಿ ಮದುವೆಯಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ನೇರವಾಗಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದು ಬೆಳಗಾವಿ ಅಧಿವೇಶನದ ಮಧ್ಯಾಹ್ನದ ಕಲಾಪ ಮುಗಿದ ನಂತರ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಎಲ್ಲರೂ ಗೋಕಾಕ್‍ನಲ್ಲಿ ನಡೆಯುವ ತಮ್ಮ ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಚಿವ ರಮೇಶ್ ಜಾರಕಿಹೊಳಿ ಆಹ್ವಾನ ನೀಡಿದ್ದರು. ಆದರೆ, ಇತ್ತೀಚೆಗೆ ಭಾರೀ ವಿವಾದಕ್ಕೆ ಗ್ರಾಸವಾಗಿದ್ದ ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಮದುವೆ ವಿಷಯವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ದುಬಾರಿ ಮದುವೆಗಳ ವಿಷಯದಲ್ಲಿ ನನ್ನ ಸಹಮತವಿಲ್ಲ. ಈ ಕುರಿತು ಕಾನೂನು ಇದೆ ಎಂಬ ಕಾರಣಕ್ಕಾಗಿ ನಾನು ಹೇಳುತ್ತಿಲ್ಲ. 1976ರಲ್ಲಿ ರೂಪಿತವಾದ ಕಾಯ್ದೆ ಪ್ರಕಾರ 5ಸಾವಿರ ಮೇಲ್ಪಟ್ಟು ವೆಚ್ಚ ಮಾಡುವ ಮದುವೆಗಳು ಅದ್ಧೂರಿ ವಿವಾಹವೆಂದು ಪರಿಗಣಿಸಲ್ಪಡುತ್ತಿದ್ದವು. ಆದರೆ ಬದಲಾದ ಸಂದರ್ಭದಲ್ಲಿ ಈ ಮೊತ್ತ ಅಗತ್ಯ ಪ್ರಮಾಣದಲ್ಲಿ ಹೆಚ್ಚಾದರೆ ತಪ್ಪಲ್ಲ.

ಆದರೆ, ಯಾರು ಏನೇ ಹೇಳಿದರೂ ನಡೆಯುವುದು ದುಬಾರಿ ವಿವಾಹವೇ. ಹೀಗಾಗಿ ನೈತಿಕವಾಗಿ ಅಲ್ಲಿ ಹೋಗುವುದು ನನಗೆ ಸರಿ ಅನ್ನಿಸುತ್ತಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ನಿಲುವು ತೆಗೆದುಕೊಂಡಿದೆ. ಪಕ್ಷದ ತತ್ವ ಹಾಗೂ ಸಿದ್ಧಾಂತವನ್ನು ಗಮನಕ್ಕೆ ತೆಗೆದುಕೊಂಡು ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಕೆಲವರು ವೈಯಕ್ತಿಕ ವಿಶ್ವಾಸದ ಅನಿವಾರ್ಯತೆಗೆ ಹೋಗಬೇಕು ಎಂದರೆ ಅದು ನಿಮಗೆ ಬಿಟ್ಟ ವಿಷಯ.  ರಾಜ್ಯದಲ್ಲಿ ಜನ ಕಷ್ಟದಲ್ಲಿರುವಾಗ ಇಂತಹ ದುಬಾರಿ ಮದುವೆಗಳು ಅವರ ಭಾವನೆಯನ್ನು ಕೆರಳಿಸುತ್ತವೆ. ನೋವು ಉಣ್ಣುವಂತೆ ಮಾಡುತ್ತದೆ. ಜನಪ್ರತಿನಿಧಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಸಚಿವರ ಸಭೆಯಲ್ಲಿ ಔಪಚಾರಿಕವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ಅರಮನೆ ಮೈದಾನದಲ್ಲಿ ನೂರಾರು ಕೋಟಿ ಸುರಿದು ಸಂಸ್ಕøತಿಯ ಹೆಸರಿನಲ್ಲಿ ಮಾಡಿದ ಮದುವೆಯ ಕುರಿತು ಜನಸಾಮಾನ್ಯರಿಂದ ಹಿಡಿದು ದೇಶದ ಸಂಸತ್‍ವರೆಗೆ ಅಪಸ್ವರ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೈಗೊಂಡಿರುವ ತೀರ್ಮಾನವನ್ನು ಸಂಪುಟದ ಸಹೋದ್ಯೋಗಿಗಳು ಮುಕ್ತಕಂಠದಿಂದ ಪ್ರಶಂಸಿದ್ದಾರೆ ಎನ್ನಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin