ಪಂಚಭೂತಗಳಲ್ಲಿ ಲೀನರಾದ ಸ್ವರಮಾಂತ್ರಿಕ ಬಾಲಮುರಳಿಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

BalamuraliKrihsn-01

ಚೆನ್ನೈ,ನ.24-ವಿಶ್ವವನ್ನೇ ಬೆರಗುಗೊಳಿಸಿದ, ಸಂಗೀತ ಸಾರಸ್ವತ ಲೋಕದ ನಾದಬ್ರಹ್ಮ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಇಲ್ಲಿ ಸಾವಿರಾರು ಅಭಿಮಾನಿಗಳ ಅಶ್ರುತರ್ಪಣದೊಂದಿಗೆ ನೆರವೇರಿತು.  ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ಸಾಯಂಕಾಲ ಕೊನೆಯುಸಿರೆಳೆದ ಗಾನಯೋಗಿ ಬಾಲಮುರಳಿ ಕೃಷ್ಣ ಅವರು ಭಾರತೀಯ ಸಂಗೀತ ಲೋಕದಲ್ಲಿ ಒಂದು ದಂತಕಥೆಯಾಗಿ ಉಳಿದವರು.  ಕರ್ನಾಟಕ ಸಂಗೀತಕ್ಕೆ ಭಾರತೀಯ ಸಂಗೀತದ ವ್ಯಾಪ್ತಿಗೆ ಕೊಂಡೊಯ್ದವರು ಬಾಲಮುರಳಿ ಕೃಷ್ಣ. ಹೆಸರಿಗೆ ತಕ್ಕಂತೆ ಕೃಷ್ಣನ ಕೊಳಲಿನ ನಾದವನ್ನೇ ಹರಿಸಿ ಲಕ್ಷಾಂತರ ರಸಿಕರನ್ನು ತಮ್ಮ ಸಂಗೀತ ತರಂಗಿಣಿಯ ಮೇಲೆ ತೇಲಿಸಿದವರು.

ಇವರಿಗೆ ಹೆತ್ತವರು ಇಟ್ಟ ಹೆಸರು ಮುರಳಿಕೃಷ್ಣ. ಆದರೆ ತಮ್ಮ 8ನೇ ವಯಸ್ಸಿನಲ್ಲಿಯೇ ತ್ಯಾಗರಾಜರ ಜಯಂತಿ ಸಂದರ್ಭ ಅದ್ಭುತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಇವರನ್ನು ಹಿರಿಯರೊಬ್ಬರು ಬಾಲ ಮುರಳಿಕೃಷ್ಣ ಎಂದು ಕರೆದರು. ಅಂದು ಅವರು ಕೊಟ್ಟ ಈ ಬಿರುದು ಅವರ ಹೆಸರಿನ ಖಾಯಂ ಆಗಿ ಉಳಿಯಿತು. ಅಂದಿನಿಂದ ಅವರು ಬಾಲಮುರಳಿ ಕೃಷ್ಣ ಆಗಿ ಸಂಗೀತ ಜಗತ್ತಿನ ಗಮನಸೆಳೆದರು.

ಗಾಯಕರಾಗಿ, ವಾಗ್ಗೇಯಕಾರರಾಗಿ, ಸಂಗೀತ ನಿರ್ದೇಶಕರಾಗಿ, ಚಿತ್ರನಟರಾಗಿ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ ಬಾಲಮುರಳಿ ಅವರು ಕರ್ನಾಟಕ ಸಂಗೀತಕ್ಕೆ ಹೊಸ ಹೊಳಹು ನೀಡಿದವರು. ಕರ್ನಾಟಕ ಸಂಗೀತದ ಮಿತಿಯನ್ನು ಭಾರತೀಯ ಸಂಗೀತಕ್ಕೆ ವಿಸ್ತರಿಸಿದ ಮಹಾನ್ ಕಲಾವಿದರು.  ಪದ್ಮಭೂಷಣ, ಪದ್ಮವಿಭೂಷಣ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆ ಇವರದು. ಈ ದೇಶದ ಮಹಾಮಹ ಸಂಗೀತ ವಿದ್ವಾಂಸರು ಬಾಲಮುರುಳಿ ಅವರ ದೈತ್ಯ ಪ್ರತಿಭೆಗೆ ಬೆರಗಾಗಿ ಹೋಗಿದ್ದರು.

ಸಂಸ್ಕøತ, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಮೇರು ಕೃತಿಗಳನ್ನು ರಚಿಸಿದ ಬಹುಭಾಷಾ ಪರಿಣತರು. ಗಾನಕಲೆಗೆ ಎಲ್ಲೆ ಇಲ್ಲ ಎಂಬುದನ್ನು ಜಗತ್ತಿನೆದುರು ಅಕ್ಷರಶಃ ಪ್ರಮಾಣಿಕರಿಸಿದ ಮಹಾನ್‍ಭಾವ ಬಾಲಮುರಳಿ ಕೃಷ್ಣ ಅವರು. ಯಾವುದೇ ಬಿರುದು ಹಚ್ಚಿದರು ಅವರ ಹೆಸರಿಗೆ ಅದು ಸಾಟಿಯಾಗಲಾರದು ಎಂಬುದೇ ಅವರ ಹೆಗ್ಗಳಿಕೆ. 1930ರಲ್ಲಿ ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಜನಿಸಿದ ಬಾಲಮುರಳಿ ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲೇ ಬದುಕು ಕಂಡುಕೊಂಡವರು. ವಿಶೇಷವೆಂದರೆ ಇವರ ತಂದೆತಾಯಿ ಇಬ್ಬರೂ ಸಂಗೀತಗಾರರಾಗಿ ಗಮನ ಸೆಳೆದವರು.  86 ವರ್ಷಗಳ ತುಂಬು ಜೀವನ ನಡೆಸಿದ ಬಾಲಮುರಳಿ ಅವರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಿಜಕ್ಕೂ ಇವರ ಈ ಅಗಲಿಕೆ ಭಾರತೀಯ ನಾದಲೋಕಕ್ಕೆ ತುಂಬಲಾರದ ನಷ್ಟ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin