ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾಷಣ , ಮೋದಿ ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

Modi-Manamohan-Singhh

ನವದೆಹಲಿ, ನ.24-ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಪ್ರತಿಭಟನೆ, ಧರಣಿ, ಕಲಾಪ ಮುಂದೂಡಿಕೆಗಳ ನಡುವೆ ಆರು ದಿನಗಳ ಬಳಿಕ ಇಂದು ರಾಜ್ಯಸಭೆಯಲ್ಲಿ ನೋಟು ರದ್ದತಿ ವಿಷಯ ಕುರಿತು ಮಹತ್ವದ ಚರ್ಚೆ ಆರಂಭವಾಯಿತು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಳಧನ ಮತ್ತು ಭ್ರಷ್ಟಾಚಾರ ನಿಗ್ರಹಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ನೋಟು ರದ್ದತಿಗಾಗಿ ಅನುಸರಿಸಿರುವ ವಿಧಾನದ ಬಗ್ಗೆ ನಮ್ಮ ಆಕ್ಷೇಪವಿದೆ. ಇದರಿಂದ ದೇಶಾದ್ಯಂತ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದೇ ಮತ್ತು ಇದರಿಂದ ಎದುರಾಗಬಹುದಾದ ಅನಾನುಕೂಲಗಳನ್ನು ನಿಭಾಯಿಸಲು ಸಿದ್ದತೆ ಮಾಡಿಕೊಳ್ಳದೇ ದಿಢೀರ್ ನಿರ್ಧಾರ ಕೈಗೊಂಡಿದೆ. ಇದರಿಂದ ದೇಶಾದ್ಯಂತ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಡಾ.ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ನೋಟು ಅಮಾನ್ಯಗೊಳಿಸಿರುವುದರಿಂದ ದೇಶದ ಜನರಿಗೆ ಅಗುತ್ತಿರುವ ಭಾರಿ ಅನಾನುಕೂಲ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.  ವಿವಿಧ ವಿರೋಧಪಕ್ಷಗಳ ನಾಯಕರೂ ಕೂಡ ಮಾತನಾಡಿ ನೋಟು ರದ್ದತಿಯಿಂದ ದೇಶಾದ್ಯಂತ ಸಾರ್ವಜನಿಕರಿಗೆ ಅಗುತ್ತಿರುವ ಅನಾನುಕೂಲದ ಬಗ್ಗೆ ವಿವರಿಸಿದರು.

ಇದಕ್ಕೂ ಮುನ್ನ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಕುರಿತು ಪ್ರಧಾನಿ ನರೇಂದ್ರ ಮೋದಿ ಖುದ್ದು ಉತ್ತರಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು.  ಸದನದಲ್ಲಿ ಮಾತನಾಡಿದ ಸಭಾ ನಾಯಕ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವಿಷಯ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ. ಈ ಬಗ್ಗೆ ಭರವಸೆ ನೀಡಿದ್ದರೂ ಪ್ರತಿಪಕ್ಷಗಳು ಅಸಹನೆಯಿಂದ ವರ್ತಿಸುತ್ತಿವೆ. ವಿಚಾರ ಕುರಿತು ಚರ್ಚೆ ನಡೆಯಬೇಕಿದ್ದರೆ ಸಹನೆಯಿಂದ ವರ್ತಿಸಬೇಕು ಎಂದು ಹೇಳಿದರು. ಇದಕ್ಕೆ ಸಚಿವ ಎಂ.ವೆಂಕಯ್ಯ ನಾಯ್ಡು ಧನಿಗೂಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧಪಕ್ಷದ ನಾಯಕ ಗುಲಾಂನಬಿ ಅಜಾದ್, ಪ್ರಧಾನಿ ಅವರು ಈ ಬಗ್ಗೆ ಉತ್ತರಿಸಲು ಇಷ್ಟು ದಿನ ಬೇಕೆ ಎಂದು ಟೀಕಿಸಿದರು.  ನಂತರ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಧರಣಿ ಮುಂದುವರಿಸಿದರು. ಉಪಸಭಾಪತಿ ಕುರಿಯನ್ ಪ್ರತಿಭಟನಾನಿರತ ಮನವೊಲಿಸಲು ನಡೆಸಿದ ಯತ್ನಗಳು ವಿಫಲವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅವರು ಮೇಲ್ಮನೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.  ಮತ್ತೆ ಕಲಾಪ ಸಮಾವೇಶಗೊಂಡಾಗ ಪ್ರಧಾನಿ ನರೇಂದ್ರ ಮೋದಿ ಕಲಾಪದಲ್ಲಿ ಪಾಲ್ಗೊಂಡರು. ಈ ವಿಷಯ ಕುರಿತ ಪ್ರಧಾನಿಯವರು ಸದನದಲ್ಲಿ ಉತ್ತರಿಸಲಿದ್ದಾರೆ ಎಂದು ಅರುಣ್ ಜೇಟ್ಲಿ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin