ಇರಾನ್ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

TRain-Accident

ಟೆಹರಾನ್, ನ.26-ಇರಾನ್‍ನಲ್ಲಿ ನಿನ್ನೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿದ್ದು, 100ಕ್ಕೂ ಹೆಚ್ಚು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇರಾನ್‍ನ ಎರಡನೇ ಅತಿ ದೊಡ್ಡ ನಗರ ಮಹಾದ್ ಮತ್ತು ಟಿಜ್ರಿಜ್ ನಡುವೆ ಸಂಚರಿಸುವ ಇಂಟರ್‍ಸಿಟಿ ಎಕ್ಸ್ ಪ್ರೆಸ್  ಸೆಮ್ನಾನ್ ಸಮೀಪ ಕೆಟ್ಟು ನಿಂತಿತ್ತು. ಅದೇ ವೇಳೆ ಇದೇ ಹಳಿಯಲ್ಲಿ ವೇಗವಾಗಿ ಬಂದ ಪ್ರಯಾಣಿಕರ ರೈಲು ಇಂಟರ್‍ಸಿಟಿ ಎಕ್ಸ್ ಪ್ರೆಸ್ ಗೆ ಹಿಂದಿನಿಂದ ರಭಸವಾಗಿ ಅಪ್ಪಳಿಸಿ ದುರಂತ ಸಂಭವಿಸಿತು ಎಂದು ಪ್ರಾಂತೀಯ ಗೌರ್ನರ್ ಮೊಹಮದ್ ರಾಝಾ ಖಬ್ಬಾಜ್ ಹೇಳಿದ್ದಾರೆ.

ಡಿಕ್ಕಿಯ ತೀವ್ರತೆಗೆ ಪ್ರಯಾಣಿಕರ ರೈಲಿನ ಎರಡು ಬೋಗಿಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಎಕ್ಸ್‍ಪ್ರೆಸ್ ರೈಲಿನ ನಾಲ್ಕು ಕೋಚ್‍ಗಳು ಹಳಿ ತಪ್ಪಿ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಗ್ನಿಗಾಹುತಿಯಾದ ಬೋಗಿಗಳಲ್ಲಿದ್ದ ಬಹುತೇಕ ಪ್ರಯಾಣಿಕರು ಸಜೀವ ದಹನಗೊಂಡರು. ಈ ಭೀಕರ ದುರಂತದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಗೌರ್ನರ್ ತಿಳಿಸಿದ್ದಾರೆ. ವಾಯುವ್ಯ ಭಾಗದಲ್ಲಿರುವ ಮಹಾದ್ ಮತ್ತು ಟಿಜ್ರಿಜ್ ನಡುವೆ ಸಂಚರಿಸುವ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ಇರಾನ್‍ನ ಅತ್ಯಂತ ದೀರ್ಘ ಅಂತರದ ರೈಲುಗಳಲ್ಲಿ ಒಂದಾಗಿದೆ.

ಈ ಘೋರ ದುರಂತಕ್ಕೆ ತೀವ್ರ ಶೀತದ ವಾತಾವರಣ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಥಂಡಿಯಿಂದ ರೈಲು ಎಂಜಿನ್ ಕಾರ್ಯನಿರ್ವಹಿಸದೆ ಕೆಟ್ಟು ನಿಂತಿತ್ತು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಇನ್ನೊಂದು ರೈಲಿಗೆ ಹಳಿ ಮೇಲೆ ಮತ್ತೊಂದು ರೈಲು ಇರುವುದು ಮಬ್ಬು ವಾತಾವರಣದಿಂದಾಗಿ ಕಾಣಲಿಲ್ಲ. ಈ ಕಾರಣದಿಂದ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin