ಕೇಂದ್ರ ಸರ್ಕಾರ – ಸುಪ್ರೀಂಕೋರ್ಟ್ ಜಗ್ಗಾಟ : ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Ravishanka-r

ಬೆಂಗಳೂರು, ನ.27-ತ್ವರಿತಗತಿ ನ್ಯಾಯದಾನಕ್ಕೆ ಅಡ್ಡಿಯಾಗಿರುವ ನ್ಯಾಯಾಧೀಶರ ನೇಮಕ ವಿಳಂಬ ನೀತಿಯನ್ನು ಎತ್ತಿ ತೋರಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ವಕೀಲ ಪರಿಷತ್ ಮಾಜಿ ಉಪಾಧ್ಯಕ್ಷ ಭೋಜೇಗೌಡ ಅವರು ಈ ಸಂಬಂಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದ ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ಒದಗಿಸುವ ನ್ಯಾಯದೇಗುಲಗಳಲ್ಲಿ ನ್ಯಾಯಾಧೀಶರ ಮತ್ತು ಸೌಲಭ್ಯಗಳ ಕೊರತೆ ಇರುವ ಬಗ್ಗೆ ನ್ಯಾಯಾಂಗದ ಮುಖ್ಯಸ್ಥರಾದ ಮುಖ್ಯನ್ಯಾಯಾಧೀಶರೇ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ನ್ಯಾಯಾಧೀಶರು ಮಾಡಿರುವ ಆಗ್ರಹಗಳ ಬಗ್ಗೆ ತ್ವರಿತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಮುಖ್ಯನ್ಯಾಯಾಧೀಶರಿಗೆ ತಿರುಗೇಟು ನೀಡಿರುವುದು ಲಕ್ಷ್ಮಣ ರೇಖೆ ತಮಗೂ ಇದೆ ಎಂದು ಹೇಳಿರುವುದು ಖಂಡನೀಯ.

ನ್ಯಾಯಾಂಗದ ಕಾನೂನು ನೀತಿಯ ಬಗ್ಗೆ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಕೂಡ ತಮ್ಮ ಎಲ್ಲೆ ಮೀರಿ ಮಾತನಾಡಿದ್ದಾರೆ ಎಂದು ಭೋಜೇಗೌಡರು ಆರೋಪಿಸಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಶಿಫಾರಸು ಮಾಡಿ ಕಳಹಿಸಿರುವ ನ್ಯಾಯಾಧೀಶರ ಪಟ್ಟಿಯನ್ನು ತಡೆ ಹಿಡಿದು ತಮಗೆ ಬೇಕಾದ ನ್ಯಾಯಾಧೀಶರಗಳನ್ನು ನೇಮಕ ಮಾಡುವ ರಹಸ್ಯ ಕಾರ್ಯಸೂಚಿ ಬಿಜೆಪಿ ಸರ್ಕಾರಕ್ಕೆ ಇದ್ದಂತಿದೆ ಎಂದು ಗಂಭೀರ ಆರೋಪ ಇವರದ್ದಾಗಿದೆ.  ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಮತ್ತು ವಿಳಂಬವಾಗದಂತೆ ನೇಮಕಾತಿ ಮಾಡಬೇಕು, ಹಾಗಾದಾಗ ಮಾತ್ರ ತ್ವರಿತಗತಿ ನ್ಯಾಯ ಜನಸಾಮಾನ್ಯರಿಗೆ ಸಿಗಲು ಸಾಧ್ಯವಾಗುತ್ತದೆ.

ಸುಪ್ರೀಂಕೋರ್ಟ್‍ನಲ್ಲಿ 61,436 ಪ್ರಕರಣಗಳು ಬಾಕಿಯಿವೆ. ಹೈಕೋರ್ಟ್‍ನಲ್ಲಿ 38,91,076 ಪ್ರಕರಣಗಳು ಬಾಕಿಯಿವೆ. ಕೆಳಹಂತದ ನ್ಯಾಯಾಲಯಗಳಲ್ಲಿ 2,30, 79,726 ಪ್ರಕರಣಗಳು ಬಾಕಿ ಇದ್ದು ಇವುಗಳನ್ನು ಇತ್ಯರ್ಥಪಡಿಸಲು 70 ಸಾವಿರ ನ್ಯಾಯಾಧೀಶರ ಅಗತ್ಯವಿದೆ. ಪ್ರಸ್ತುತ 18 ಸಾವಿರ ನ್ಯಾಯಾಧೀಶರಷ್ಟೇ ಇದ್ದಾರೆ.  ನ್ಯಾಯಾಲಯಗಳಿಗೆ ತ್ವರಿತಗತಿಯ ನೇಮಕಾತಿ ನಡೆಯಬೇಕು. ಅನಗತ್ಯವಾಗಿ ನ್ಯಾಯಾಂಗದ ಜೊತೆ ನಡೆಸುವ ವಾಗ್ವಾದ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin