ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ : ಹಿರಿಯರಿಗೆ ಪರೀಕ್ಷೆ , ಕಿರಿಯರಿಗೆ ಅದೃಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

test-cricket

ಸರಣಿ ವಿಜಯೋತ್ಸವ ಸಾಧಿಸುತ್ತಿರುವ ಸಮಯದಲ್ಲೇ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ ಹೆಚ್ಚುತ್ತಿರುವ ಗಾಯಾಳುಗಳ ಸಮಸ್ಯೆ ತಲೆನೋವಾಗಿದ್ದರೂ ಹಿರಿಯರಿಗೆ ಪರೀಕ್ಷೆ ಮತ್ತು ಕಿರಿಯರಿಗೆ ಅದೃಷ್ಟ ಬಾಗಿಲು ತೆರೆದಂತಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ವೇಳೆಯೇ ಹಿರಿಯ ಆಟಗಾರರಾದ ಭುವನೇಶ್ವರ್‍ಕುಮಾರ್, ಮೊಹಮ್ಮದ್ ಶಮಿ,ಶಿಖರ್‍ಧವನ್ ಸೇರಿದಂತೆ ಯುವ ಆಟಗಾರ ಲೋಕೇಶ್‍ರಾಹುಲ್ ಕೂಡ ನ್ಯೂಜಿಲೆಂಡ್‍ನ ಸರಣಿಯಿಂದ ಹೊರಗುಳಿಯಬೇಕಾಯಿತು. ಈಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅದೇ ರಾಗ ಅದೇ ಹಾಡು ಎಂಬಂತೆ ಮತ್ತದೇ ಗಾಯಾಳುಗಳ ಸಮಸ್ಯೆಗಳ ಪಟ್ಟಿ ನಾಯಕ ವಿರಾಟ್ ಕೊಹ್ಲಿಯನ್ನು ವಿಚಲಿತಗೊಳಿಸಿದರೂ ಯುವ ಆಟಗಾರರು ಬೆಳಕಿಗೆ ಬರಲು ಉತ್ತಮ ಅವಕಾಶವಾಗಿದೆ.

ನ್ಯೂಜಿಲೆಂಡ್‍ನ ಸರಣಿಯ ವೇಳೆ ಗಾಯಗೊಂಡಿದ್ದ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ತಂಡವನ್ನು ಕೂಡಿಕೊಂಡಿರುವುದರಿಂದ ಬೌಲಿಂಗ್‍ನ ಶಕ್ತಿ ಸದೃಢಗೊಂಡಿದೆ. ಆದರೆ ಭುವನೇಶ್ವರ್‍ಕುಮಾರ್, ಇಶಾಂತ್‍ಶರ್ಮಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದಿರುವುದು ವಿರಾಟ್‍ಗೆ ಚಿಂತೆಯಾಗಿದೆ. ಇದರ ಜೊತೆಗೆ ಒಬ್ಬ ಆಟಗಾರ ಗಾಯಗೊಂಡು ಅಂತಾರಾಷ್ಟ್ರೀಯ ತಂಡದಿಂದ ಹೊರ ನಡೆದ ನಂತರ ಮತ್ತೆ ತಂಡವನ್ನು ಕೂಡಿಕೊಳ್ಳಬೇಕಾದರೆ ದೇಶೀಯ ತಂಡದಲ್ಲಿ ಪಾಲ್ಗೊಳ್ಳಬೇಕೆಂದು ತರಬೇತುದಾರ ಅನಿಲ್‍ಕುಂಬ್ಳೆ ಹೇಳಿರುವುದು ಆಟಗಾರರಿಗೆ ಮತ್ತಷ್ಟು ತಲೆನೋವಾಗಿದೆ. ಈ ನಡುವೆ ಕೆ.ಎಲ್.ರಾಹುಲ್ ಕರ್ನಾಟಕ ತಂಡದ ಪರ ಆಡಿ ಶತಕ ಹಾಗೂ ಅರ್ಧಶತಕ ಗಳಿಸುವ ಮೂಲಕ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಕೆ.ಎಲ್.ರಾಹುಲ್ ಆ ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದು ಮೊಹಾಲಿ ಟೆಸ್ಟ್‍ನಿಂದ ಹೊರಗುಳಿದಿದ್ದರೆ ಮುಂದಿನ ಮುಂಬೈ ಟೆಸ್ಟ್‍ನಲ್ಲೂ ಪಾಲ್ಗೊಳ್ಳುವುದು ಅನುಮಾನವಾಗಿದೆ.

ವೆಸ್ಟ್‍ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಗಾಯಗೊಂಡಿದ್ದರಿಂದ ನಂತರ 2 ಟೆಸ್ಟ್‍ಗಳು ಹಾಗೂ 5 ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈಗ ವೈಜಾಗ್ ಟೆಸ್ಟ್ ವೇಳೆ ಫೀಲ್ಡಿಂಗ್ ವೇಳೆ ಗಾಯಗೊಂಡಿರುವ ರಾಹುಲ್ ಮೊಹಾಲಿ ಟೆಸ್ಟ್‍ನಿಂದ ಹೊರನಡೆದಿದ್ದು ,ಹಾಗೊಂದು ವೇಳೆ ರಾಹುಲ್ ಆ ಪಂದ್ಯದಿಂದ ಹೊರಗುಳಿದರೆ ಆ ಸ್ಥಾನವನ್ನು ತುಂಬಲು ಕಳಪೆ ಫಾರ್ಮ್‍ನಿಂದ ತಂಡದಿಂದ ಹೊರಗುಳಿದಿರುವ ಶಿಖರ್ ಧವನ್ ತವಕದಿಂದಿದ್ದಾರೆ. ಶಿಖರ್ ಧವನ್ ಕೂಡ ಇತ್ತೀಚೆಗೆ ನಡೆದ ರಾಜಸ್ಥಾನದ ವಿರುದ್ಧದ ರಣಜಿ ಪಂದ್ಯದಲ್ಲಿ ನವದೆಹಲಿ ತಂಡವನ್ನು ಪ್ರತಿನಿಧಿಸಿ ತಮ್ಮ ಸಾಮಥ್ರ್ಯವನ್ನು ತೋರಿಸಿರುವ ಮೂಲಕ ಆಯ್ಕೆಗಾರರ ಗಮನವನ್ನು ಸೆಳೆದಿದ್ದು ಮುಂಬೈ ಟೆಸ್ಟ್‍ನತ್ತ ದೃಷ್ಟಿ ನೆಟ್ಟಿದ್ದಾರೆ.

ಇನ್ನು ವಿಕೆಟ್ ಕೀಪರ್ ವೃದ್ಧಿಮಾನ್ ಶಾ ಕೂಡ ಗಾಯಗೊಂಡು ಹೊರ ನಡೆದಿರುವುದರಿಂದ ಆ ಸ್ಥಾನವನ್ನು ಮತ್ತೊಬ್ಬ ವಿಕೆಟ್ ಕೀಪರ್ ಪಾರ್ಥೀವ್ ಪಾಟೀಲ್ ತುಂಬಿದ್ದಾರೆ. ಈ ನಡುವೆ ನ್ಯೂಜಿಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಆರಂಗ್ರೇಟಂ ಮಾಡಿದ್ದ ಮತ್ತೊಬ್ಬ ಯುವ ಆಟಗಾರ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲೂ ಪಾರ್ದಾಪಣೆ ಮಾಡುವ ತವಕದಲ್ಲಿದ್ದರು. ಆದರೆ ಅವರು ಎಡಗೈ ಭುಜದ ನೋವಿನಿಂದ ಬಳಲುತ್ತಿರುವುದರಿಂದ ಅವರ ಆಸೆಗೆ ತಣ್ಣೀರೆರಚಿದೆ.  ಹಿಂದೆ ಶ್ರೀಲಂಕಾದ ವಿರುದ್ಧದ ಸರಣಿ ವೇಳೆ ಆರಂಭಿಕ ಆಟಗಾರ ಮುರಳಿ ವಿಜಯ್ ಗಾಯಗೊಂಡಿದ್ದರಿಂದ ಕೆ.ಎಲ್.ರಾಹುಲ್ ಭಾರತ ತಂಡದ ಉತ್ತಮ ಆರಂಭಿಕ ಆಟಗಾರನಾಗಿ ಹೊರಹೊಮ್ಮಲು ಸಾಧ್ಯವಾಯಿತು. ಈಗ ಕೆ.ಎಲ್.ರಾಹುಲ್‍ರ ಗಾಯದ ಸಮಸ್ಯೆಯಿಂದ ಮತ್ತೊಬ್ಬ ಕನ್ನಡಿಗ ಕರುಣ್‍ನಾಯರ್‍ಗೆ ಅದೃಷ್ಟದ ಬಾಗಿಲು ತೆರೆದಿದೆ.ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ಇಶಾಂತ್, ಭುವನೇಶ್ವರ್‍ರಂತಹ ಹಿರಿಯರಿಗೆ ಒಂದು ರೀತಿ ಪರೀಕ್ಷೆಯಾದರೆ, ಕರುಣ್, ಜಯಂತ್ ಯಾದವ್‍ರಂತಹ ಯುವಕರಿಗೆ ಅದೃಷ್ಟ ಬಾಗಿಲು ತೆರೆಯುವಂತಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin