ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ..?

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ,ನ.27-ದೇಶವನ್ನು 70 ವರ್ಷಗಳಿಂದ ಕಾಡುತ್ತಿದ್ದ ಕಾಯಿಲೆಯನ್ನು ಗುಣಪಡಿಸುವ ಉದ್ದೇಶದಿಂದ ಗರಿಷ್ಠ ಮೌಲ್ಯದ ನೋಟು ರದ್ದತಿಗೆ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ದೇಶದ 125 ಕೋಟಿ ಜನ ನನ್ನ ನಿಲುವಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಅಕ್ರಮ ಹಣವನ್ನು ಬಡವರ ಖಾತೆಗಳಲ್ಲಿಟ್ಟು ಅವರೊಂದಿಗೆ ಚೆಲ್ಲಾಟವಾಡುವ ಉಳ್ಳವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಮೋದಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.   ನೋಟು ರದ್ದತಿ ಬೆಳವಣಿಗೆ ನಂತರ ಇದೇ ಮೊದಲ ಬಾರಿಗೆ ಮನ್ ಕಿ ಬಾತ್ ಬಾನುಲಿ ಪ್ರಸಾರ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನ.8ರಂದು ಸರ್ಕಾರ ಕೈಗೊಂಡ ನಿರ್ಧಾರ ಅತ್ಯಂತ ಕಠಿಣದಾಗಿತ್ತು. ದೇಶದ 125 ಕೋಟಿ ಜನರ ಆಶಯವನ್ನು ಈಡೇರಿಸುವ ಉದ್ದೇಶದಿಂದ ಈ ದಿಟ್ಟ ನಿಲುವು ಕೈಗೊಳ್ಳಲಾಗಿದೆ ಎಂದರು.

ನೋಟು ರದ್ದತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದರೆ ಬದಲಾವಣೆ ಅನಿವಾರ್ಯ. 50 ದಿನಗಳ ಒಳಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದು ಮೋದಿ ಅಭಯ ನೀಡಿದರು.
ಇದೇ ವೇಳೆ ನೋಟು ನಿಷೇಧ ಮಾಡಿದ ಕ್ರಮವನ್ನು ಪ್ರಶಂಸಿಸಿದ ಕರ್ನಾಟಕದ ಕೊಪ್ಪಳದ ಯಲ್ಲಪ್ಪ ವೇಳಣ್ಕರ್ ಬಗ್ಗೆ ಮೆಚ್ಚುಗೆ ಮಾತನಾಡಿದರು. ಅಲ್ಲದೆ ನೋಟು ನಿಷೇಧದ ಬಗ್ಗೆ ಮೆಚ್ಚುಗೆ ಮಾತನಾಡಿದ ವೇಳಣ್ಕರ್‍ನ ಧ್ವನಿಯನ್ನು ಮನ್‍ಕಿ ಬಾತ್‍ನಲ್ಲಿ ಬಿತ್ತರಿಸಿದ್ದು ವಿಶೇಷವಾಗಿತ್ತು. ಕೇಂದ್ರ ಸರ್ಕಾರದ ಕ್ರಮದಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವುದು ನಿಜ, ಆದರೆ ಇಂತಹ ಎಲ್ಲಾ ಸಮಸ್ಯೆಗಳಿಂದ ಹೊರಬರಲು 50 ದಿನಗಳು ಬೇಕಾಗುತ್ತದೆ. ಬೇನಾಮಿ ವ್ಯವಹಾರಗಳ ಬಗ್ಗೆ ಇನ್ನು ಮುಂದೆ ಕ್ರಮ ಕೈಗೊಳ್ಳುತ್ತೇವೆ. ಈ ಮೊದಲು ಕೆಲ ಶ್ರೀಮಂತರು ತೆರಿಗೆ ಕಟ್ಟುತ್ತಿರಲಿಲ್ಲ. ಈಗ ನೋಟು ನಿಷೇಧ ಮಾಡಿದ ಮೇಲೆ ತೆರಿಗೆ ಕಟ್ಟುತ್ತಿದ್ದಾರೆ ಎಂದು ತಮ್ಮ ನೆಚ್ಚಿನ ರೇಡಿಯೋ ಭಾಷಣದ ಮನ್‍ಕಿ ಬಾತ್‍ನಲ್ಲಿ ಮನದಾಳದ ಮಾತನ್ನು ವ್ಯಕ್ತಪಡಿಸಿದರು.
ಕಪ್ಪುಹಣ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು, ಈಗಾಗಲೇ ಈ ಸಂಬಂಧ ಕಾಯ್ದೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಳಧನಿಕರ ಮೇಲೆ ಕಣ್ಣಿಟ್ಟು ಮತ್ತಷ್ಟು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.

ವಿವಿಧ ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯಬೇಕು. ಎಲ್ಲ ಬ್ಯಾಂಕ್‍ಗಳಲ್ಲಿ ವ್ಯವಹಾರದ ಬಗ್ಗೆ ಆ್ಯಪ್ ಸೌಲಭ್ಯವಿದ್ದು , ಪ್ರತಿಯೊಬ್ಬರು ಮೊಬೈಲ್ ಆ್ಯಪ್ ಬಳಸಬೇಕು ಎಂದರು.
ನಗದು ವ್ಯವಹಾರವನ್ನು ಕಡಿಮೆ ಮಾಡಿ ನಗದು ರಹಿತ ಸಮಾಜ ನಿರ್ಮಾಣ ಮಾಡಬೇಕೆಂಬ ಮಹಾದಾಸೆ ಇದೆ. ಆದರೆ ಶೇ.100ರಷ್ಟು ನಗದುರಹಿತ ಸಮಾಜ ಮಾಡಲು ಸಾಧ್ಯವಿಲ್ಲ ಆದರೆ ಲೆಸ್ ಕ್ಯಾಶ್( ನಗದು ರಹಿತ) ಸಮಾಜ ನಿರ್ಮಾಣ ಮಾಡಲು ಸಹಕರಿಸಿ ಎಂದು ದೇಶದ ಜನರಲ್ಲಿ ಮೋದಿ ಮನವಿ ಮಾಡಿದರು.  ದೇಶ ಬದಲಾವಣೆ ಮಾಡುವ ಸಾಮಥ್ರ್ಯ ಯುವಕರಲ್ಲಿದೆ. ತಂತ್ರಜ್ಞಾನ ಬಳಸಿ ಜನರಲ್ಲಿ ಅರಿವು ಮೂಡಿಸಿ. ಪ್ರತಿದಿನ 10 ಜನರಿಗೆ ತಂತ್ರಜ್ಞಾನದ ಬಗ್ಗೆ ತಿಳಿಸಿ ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು.

ನೋಟು ನಿಷೇಧಕ್ಕೆ ಇಡೀ ವಿಶ್ವವೇ ಅಚ್ಚರಿಗೊಂಡಿದ್ದು, ದೇಶದ ಬ್ಯಾಂಕ್ ಸಿಬ್ಬಂದಿಗಳು ಇದಕ್ಕೆ ಸಹಕರಿಸಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ, ತಮ್ಮ ತೊಂದರೆಯ ನಡುವೆಯೂ ನೋಟು ರದ್ದತಿಗೆ ಬೆಂಬಲ ವ್ಯಕ್ತಪಡಿಸಿರುವ ದೇಶದ ಜನತೆಗೆ ತಾನು ಅಭಿನಂದನೆ ಸಲ್ಲಿಸುವುದಾಗಿ ಮೋದಿ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin