ಎಟಿಎಂ ಹಣದ ವಾಹನದೊಂದಿಗೆ ಪರಾರಿ ಪ್ರಕರಣ : ಚಾಲಕ ಡಾಮ್ನಿಕ್ ಪತ್ನಿ ಬಂಧನ, 79.8 ಲಕ್ಷ ಹಣ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ATM-Money-Robbery

ಬೆಂಗಳೂರು,ನ.28-ಬ್ಯಾಂಕ್‍ನ ಬಾಗಿಲಿನಿಂದಲೇ 1.37 ಕೋಟಿ ರೂ. ಹಣದೊಂದಿಗೆ ಸಿನಿಮಿಯ ರೀತಿ ಚಾಲಕ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿಯನ್ನು ಬಂಧಿಸಿರುವ ಪೊಲೀಸರು 79.8 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕ್ ವಾಹನ ಚಾಲಕ ಡೊಮ್ನಿಕ್ ಪತ್ನಿ ಎಲ್ವಿನ್ ಬಂಧಿತ ಮಹಿಳೆ.
ಬಾಣಸವಾಡಿಯ ಮನೆಯೊಂದರಲ್ಲಿ ಆರೋಪಿ ಚಾಲಕ ಡೊಮ್ನಿಕ್ ಪತ್ನಿ ವಾಸವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ರಾತ್ರಿ ಮನೆ ಮೇಲೆ ದಾಳಿ ಮಾಡಿ ಆಕೆಯನ್ನು ಬಂಧಿಸಿ 79.8 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.  ಆರೋಪಿ ಚಾಲಕ 12 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದು ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಂಡಿದೆ.

ಘಟನೆ ವಿವರ:

ನಿತ್ಯ ಬ್ಯಾಂಕ್‍ಗಳಿಂದ ಹಣ ಸಂಗ್ರಹಿಸಿ ಎಟಿಎಂಗಳಿಗೆ ಹಣ ತುಂಬುವ ಲಾಗಿ ಕ್ಯಾಶ್ ಕಂಪನಿಯ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಡೊಮ್ನಿಕ್, ನ.23ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಸಿಬ್ಬಂದಿ ಶಿವಕುಮಾರ್, ಸಲೀಂ ಹಾಗೂ ಗನ್‍ಮ್ಯಾನ್ ಚಮನ್‍ಲಾಲ್ ಅವರ ಜೊತೆ ಬ್ಯಾಂಕ್‍ಗಳಿಂದ ಹಣ ಸಂಗ್ರಹಿಸಲು ಹೊರಟಿದ್ದನು.  ನಗರ್ತಪೇಟೆಯ ಕೋಟಕ್ ಮಹೇಂದ್ರ ಬ್ಯಾಂಕ್‍ನಲ್ಲಿ ಮೊದಲು ಹಣ ಪಡೆದು ತದನಂತರ ಜೆಸಿ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್‍ನಿಂದ ಹಣ ಸಂಗ್ರಹಿಸಿ ಒಟ್ಟು 1.37 ಕೋಟಿ ರೂ.ಗಳನ್ನು ವಾಹನದಲ್ಲಿಟ್ಟುಕೊಂಡು ಕೆಜಿ ರಸ್ತೆಯಲ್ಲಿನ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗೆ ಬಂದಿದ್ದರು.

ಈ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಸಲೀಂ ಬ್ಯಾಂಕ್ ಒಳಗೆ ಹೋಗಿದ್ದಾಗ, ವಾಹನ ಬಳಿಯಿದ್ದ ಗನ್‍ಮ್ಯಾನ್ ಮೂತ್ರವಿಸರ್ಜನೆಗೆ ತೆರಳಿದ್ದನ್ನು ಗಮನಿಸಿದ ವಾಹನ ಚಾಲಕ ಡೊಮ್ನಿಕ್ ಹಣದೊಂದಿಗೆ ಪರಾರಿಯಾಗಿದ್ದ.  ಸ್ವಲ್ಪ ಸಮಯದ ಬಳಿಕ ಗನ್‍ಮ್ಯಾನ್ ಬಂದಾಗ ವಾಹನ ಇಲ್ಲದಿರುವುದು ಗಮನಿಸಿ ತಕ್ಷಣ ಬ್ಯಾಂಕ್ ಒಳಗೆ ಹೋಗಿದ್ದ ಸಲೀಂ ಮತ್ತು ಶಿವಕುಮಾರ್‍ಗೆ ತಿಳಿಸಿದ್ದರು. ತಕ್ಷಣ ಲಾಗಿ ಕ್ಯಾಶ್ ಏಜೆನ್ಸಿ ಸಿಬ್ಬಂದಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಚಾಲಕ ಡೊಮ್ನಿಕ್ ಪತ್ತೆಗಾಗಿ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಅವರು 4 ವಿಶೇಷ ತಂಡ ರಚಿಸಿದ್ದರು.

ಈ ತಂಡ ಕಾರ್ಯಾಚರಣೆ ನಡೆಸಿ ನ.24ರಂದು ಅಂದರೆ ಘಟನೆ ನಡೆದ ಮಾರನೇ ದಿನವೇ ವಸಂತನಗರದ ಮೌಂಟ್ ಕಾರ್ಮೆಲ್ ಶಾಲೆ ಬಳಿ ವಾಹನ ಪತ್ತೆಯಾಗಿತ್ತು.  ವಾಹನದಲ್ಲಿದ್ದ 45 ಲಕ್ಷ ಹಣ ಹಾಗೂ ಗನ್‍ನನ್ನು ವಶಕ್ಕೆ ಪಡೆದಿದ್ದ ತನಿಖಾ ತಂಡ, 92 ಲಕ್ಷ ಹಣ, ಪತ್ನಿ ಜೊತೆ ಪರಾರಿಯಾಗಿದ್ದ ಆರೋಪಿ ಚಾಲಕನಿಗಾಗಿ ಬಲೆ ಬೀಸಿತ್ತು. ತನಿಖಾ ತಂಡ ರಾತ್ರಿ ಈತನ ಪತ್ನಿಯನ್ನು ಬಂಧಿಸಿ 79.8 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ಕಳುವಾಗಿದ್ದ 1.37 ಕೋಟಿ ರೂ. ಪೈಕಿ 1.24 ಕೋಟಿ ರೂ. ಸಿಕ್ಕಿದಂತಾಗಿದ್ದು, ಆರೋಪಿಗಾಗಿ ಶೋಧ ಮುಂದುವರೆದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin