ಸಂಸತ್ತಿನಲ್ಲಿ ಮುಂದುವರಿದ ನೋಟು ಗದ್ದಲ, ಜೆಪಿಸಿ ತನಿಖೆಗೆ ಆಗ್ರಹ, ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Session-Parliament

ನವದೆಹಲಿ, ನ.28-ನೋಟು ಅಮಾನ್ಯಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದೂ ಸಹ ಪ್ರತಿಪಕ್ಷಗಳಿಂದ ಭಾರೀ ಪ್ರತಿಭಟನೆ ಮತ್ತು ಧರಣಿ ಮುಂದುವರೆಯಿತು. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಉತ್ತರಿಸಬೇಕು ಹಾಗೂ ಈ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯಾಗಬೇಕೆಂದು ವಿರೋಧಪಕ್ಷಗಳು ಬಿಗಿಪಟ್ಟು ಮುಂದುವರಿಸಿದ ಕಾರಣ ಕೋಲಾಹಲದ ವಾತಾವರಣ ಉಂಟಾಗಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಬೇಕಾಯಿತು.  ಲೋಕಸಭೆಯಲ್ಲಿ ಇಂದು ಕ್ಯೂಬಾ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ನೋಟು ರದ್ದತಿ ವಿಷಯ ಚರ್ಚೆಗಾಗಿ ನಿಲುವಳಿ ಸೂಚನೆಗೆ ಒತ್ತಾಯಿಸಿದರು.


ನೋಟ್ ಬ್ಯಾನ್ ಖಂಡಿಸಿ ಕರೆಕೊಟ್ಟಿರುವ ಭಾರತ್ ಬಂದ್ ಗೆ ನಿಮ್ಮ ಬೆಂಬಲವಿದೆಯೇ ..?

View Results

Loading ... Loading ...

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಸದನ ಹೊರಗೆ ಮಾತ್ರ ಹೇಳಿಕೆ ನೀಡುತ್ತಿದ್ದಾರೆ. ಸದನದಲ್ಲಿ ಈವರೆಗೆ ಈ ಬಗ್ಗೆ ಮಾತನಾಡಿಲ್ಲ. ನೋಟು ರದ್ದತಿ ಬಗ್ಗೆ ಜೆಪಿಸಿ ತನಿಖೆಯಾಗಬೇಕು. ಈ ಬಗ್ಗೆ ಈಗಲೇ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.  ಸರ್ಕಾರದ ಪರವಾಗಿ ಉತ್ತರಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ದೇಶದ ಹಿತಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಿಯವರು ಸದನದಲ್ಲಿ ಖಂಡಿತ ಉತ್ತರ ನೀಡುತ್ತಾರೆ ಎಂದು ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು.
ಸದನದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಡಿ. ಇದು ನಿಯಮಕ್ಕೆ ವಿರುದ್ಧ. ಏನೇ ಚರ್ಚೆಗಳಿದ್ದರೂ ಪ್ರಶ್ನೋತ್ತರ ಕಲಾಪದ ನಂತರ ಇದಕ್ಕೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು.

ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್, ಎಸ್‍ಪಿ, ಆರ್‍ಜೆಡಿ, ಎನ್‍ಸಿಪಿ, ಟಿಎಂಪಿ, ಎಎಪಿ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸದಸ್ಯರೆಲ್ಲರೂ ಭಿತ್ತಿಪತ್ರಗಳನ್ನು ಹಿಡಿದು ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದಿರುವ ಸ್ಥಳಕ್ಕೆ ತೆರಳಿ ಧರಣಿ ಮುಂದುವರಿಸಿದರು. ಸುಗಮ ಕಲಾಪ ನಡೆಯಲು ಅವಕಾಶ ನೀಡುವಂತೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಪದೇ ಪದೇ ಮನವಿ ಮಾಡಿದರೂ ಗದ್ದಲ-ಕೋಲಾಹಲಗಳು ತೀವ್ರಗೊಂಡ ಕಾರಣ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಮೇಲ್ಮನೆಯಲ್ಲೂ ಕೋಲಾಹಲ :

ರಾಜ್ಯಸಭಾ ಕಲಾಪದಲ್ಲೂ ಸಹ ಇದೇ ಸ್ಥಿತಿ ಮುಂದುವರೆಯಿತು. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಉತ್ತರಿಸಬೇಕು ಹಾಗೂ ಜೆಪಿಸಿ ತನಿಖೆಯಾಗಬೇಕು ಎಂದು ಕಾಂಗ್ರೆಸ್, ಟಿಎಂಪಿ, ಎಎಪಿ ಹಾಗೂ ಸಿಪಿಎಂ ಸದಸ್ಯರು ಒತ್ತಾಯಿಸಿದರು. ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮಾತನಾಡಿ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ಧಾಳಿ ನಡೆಸಿದರು. ನಂತರ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಧರಣಿ ಮುಂದುವರಿಸಿದರು. ಉಪಸಭಾಪತಿ ಕುರಿಯನ್ ಪ್ರತಿಭಟನಾನಿರತ ಮನವೊಲಿಸಲು ನಡೆಸಿದ ಯತ್ನಗಳು ವಿಫಲವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅವರು ಮೇಲ್ಮನೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin