ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ : ಸಚಿವ ಎ.ಮಂಜು ಅಧಿಕಾರಿಗಳಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

manju

ಹಾಸನ, ನ.29- ರಾಜ್ಯಾದ್ಯಂತ ಬರ ಪರಿಸ್ಥಿತಿ-ಹಾಸನ ಜಿಲ್ಲೆಯಲ್ಲೂ  ಇದೇ ಸ್ಥಿತಿ. ಇದನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ   ಸೂಕ್ತ ಕ್ರಮ ವಹಿಸಬೇಕು. ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಅನುಷ್ಠಾನ ಚುರುಕಾಗಬೇಕು ಎಂದು ಜಿಲ್ಲಾ  ಉಸ್ತುವಾರಿ ಸಚಿವ ಎ.ಮಂಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ .ಬರ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಜಿಲ್ಲಾಧಿಕಾರಿ  , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆಗಳ ಉಪನಿರ್ದೇಶಕರು ಹಾಗೂ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರುಗಳ ಸಭೆಯನ್ನು ನಡೆಸಿದ ಸಚಿವರು ರೈತಾಪಿ ವರ್ಗ ಮತ್ತು ಗ್ರಾಮೀಣ ಪ್ರದೇಶದ ಜನತೆ ಬರದಿಂದ ಕಗ್ಗೆಟಿದ್ದಾರೆ . ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಕಷ್ಟಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕು ಎಂದು ಹೇಳಿದರು.

ಕೊಳವೆ ಬಾವಿ ಕೊರೆಯಲು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುದಾನ ಒದಗಿಸಲಾಗಿದೆ. ಕುಡಿಯುವ ನೀರು ಸಮಸ್ಯೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಕಾರ್ಯದಲ್ಲಿ ಯಾವುದೇ ಲೋಪಕವಾಗಬಾರದು. ಅಧಿಕಾರಿಗಳು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.ದನಕರುಗಳ ಮೇವಿನ ಲಭ್ಯತೆ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಲೇ ಒಣ ಮೇವು ಖರೀದಿಸಿಡಲು ಕ್ರಮ ವಹಿಸಬೇಕು ಹಾಗೂ ಹಸಿ ಮೇವನ್ನು ಉತ್ಪಾದಿಸಲು ಸಿದ್ಧತೆ ಕೈಗೊಳ್ಳಬೇಕು ಅದಕ್ಕಾಗಿ ರೈತರ ನೆರವು ಪಡೆಯಬೇಕು ಎಂದರು.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಇದ್ದ ಅಡೆತಡೆ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವೆಂಕಟೇಶ್‍ಕುಮಾರ್ ಅವರಿಂದ ಮಾಹಿತಿ ಪಡೆದ ಸಚಿವರು ತಕ್ಷಣವೇ ಗ್ರಾಮೀಣಾಭಿವೃದ್ಧಿ ಸಚಿವರಾದ ಹೆಚ್.ಕೆ.ಪಾಟೀಲ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿ ಶೀಘ್ರವೇ ಅಗತ್ಯ ಪ್ರಮಾಣದಷ್ಟು ಅನುದಾನವನ್ನು ಪೂರೈಸಲು ಕೋರಿ ತಕ್ಷಣ ಕಾಮಗಾರಿ ಪ್ರಾರಂಭಿಸಲು ಅನುಮತಿಯನ್ನು ಪಡೆದರು.

ಇದೇ ವೇಳೆ ಜಿಲ್ಲಾಧಿಕಾರಿ ವಿ. ಚೈತ್ರ ಅವರು ಬರ ಪರಿಸ್ಥಿತಿ ನಿರ್ವಹಣೆಗೆ ಲಭ್ಯವಿರುವ ಅನುದಾನ, ಕೈಗೊಂಡಿರುವ ಕ್ರಮಗಳು, ನೋಡಲ್ ಅಧಿಕಾರಿಗಳ ನೇಮಕಾತಿಗಳ ಬಗ್ಗೆ ವಿವರಿಸಿದರು.ಜಿಲ್ಲಾ  ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಧಿಕಾರಿ ಆರ್. ವೆಂಕಟೇಶ್ ಕುಮಾರ್ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳಿಗೆ ಕೈಗೊಂಡಿರುವ ಕ್ರಮಗಳು ಅಗತ್ಯವಿರುವ ಅನುದಾನ ಬರ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.ಜಂಟಿ ಕೃಷಿ ನಿರ್ದೇಶಕ ರಾಮಚಂದ್ರಯ್ಯ, ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ.ಧರ್ಮಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ನಾಗರಾಜ್ ಮತ್ತಿರರರು ಹಾಜರಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin