ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿಗಾಗಿ ಕ್ಯಾಮೆರಾ ಟ್ರಾಪಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Tiger-01

ಹುಣಸೂರು, ನ.30- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೆಶನದಂತೆ 4ನೇ ಹಂತದಲ್ಲಿ ನಾಗರಹೊಳೆ (ರಾಜೀವ ಗಾಂಧಿ ನ್ಯಾಷನಲ್ ಪಾರ್ಕ್) ರಾಷ್ಟ್ರೀಯ ಉದ್ಯಾನದ 8 ವಲಯಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಹುಲಿ ಗಣತಿ ನಡೆಸುವ ಸಲುವಾಗಿ 198 ಕಡೆ ಕ್ಯಾಮೆರಾ ಅಳವಡಿಸಲಾಗಿದ್ದು, ಡಿ.31ರವರೆಗೆ ಕ್ಯಾಮೆರಾ ಟ್ರಾಪಿಂಗ್ ಕಾರ್ಯದ ಮೂಲಕ ಗಣತಿ ನಡೆಯಲಿದೆ.  ಈ ಹಿಂದೆಲ್ಲಾ ಪರಿಣಿತರು ಹುಲಿಯ ಮಲ, ಹೆಜ್ಜೆಯಿಂದ ಹುಲಿ ಗಣತಿ ನಡೆಸಲಾಗುತ್ತಿತ್ತು. ಹಲವಾರು ವರ್ಷಗಳಿಂದ ಕ್ಯಾಮೆರಾ ಟ್ರಾಪಿಂಗ್ ಮೂಲಕ ನಿಖರ ಮಾಹಿತಿ ತಿಳಿಯಲಾಗುತ್ತಿದೆ. ಇದಕ್ಕಾಗಿ ಕಾಡಿನಲ್ಲಿ ಗಣತಿ ಕಾರ್ಯ ನಡೆಸುವ ಬಗೆಗೆ ಈಗಾಗಲೇ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಲ್ಲ ವಲಯಗಳ ವಲಯಾರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕ್ಯಾಮೆರಾ ಬಾಕ್ಸ್‍ನಲ್ಲಿ ಕ್ಯಾಮೆರಾ ಅಳವಡಿಸಿ ಕಾರ್ಯಾರಂಭ ಮಾಡಲಾಗಿದ್ದು, ವಾರದಿಂದ ಬಿರುಸಾಗಿ ಸಾಗಿದೆ.

ಇದಕ್ಕೂ ಮುನ್ನಾ ಸಿಬ್ಬಂದಿಗಳು ಹುಲಿ ಓಡಾಡುವ ಪ್ರದೇಶವನ್ನು ಗುರುತಿಸಿದ್ದಾರೆ. ಹುಲಿಗಳ ನಿಖರ ಮಾಹಿತಿಗಾಗಿ ಈ ವ್ಯವಸ್ಥೆ ಹಲವಾರು ವರ್ಷಗಳಿಂದಿದೆ. ಹುಲಿ ಮೈಮೇಲಿನ ಪಟ್ಟೆ, ಮನುಷ್ಯನ ಬೆರಳಿನ ರೇಖೆಯಂತೆ ಒಂದಕ್ಕೊಂದು ಭಿನ್ನವಾಗಿರುತ್ತದೆ. ಕಾಡಿನಲ್ಲಿ ಓಡಾಡುವ ಹುಲಿಗಳು ಕ್ಯಾಮೆರಾಕ್ಕೆ ಬೀಳುವುದರಿಂದ ನಿಖರ ಮಾಹಿತಿ ಪಡೆಯಲು ಸಾಧ್ಯವಾಗಿದೆ.  ನಾಗರಹೊಳೆ ರಾಷ್ಟ್ರೀಯ (ರಾಜೀವಗಾಂಧಿ ನ್ಯಾಷನಲ್‍ಪಾರ್ಕ್) ಉದ್ಯಾನವನದ ನಾಗರಹೊಳೆ, ಕಲ್ಲಳ್ಳ, ವೀರನಹೊಸಹಳ್ಳಿ, ಮತ್ತಿಗೋಡು, ಹುಣಸೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಸೇರಿದಂತೆ ಎಂಟು ವಲಯಗಳಲ್ಲಿ 198 ಕಡೆ ಕ್ಯಾಮೆರಾವನ್ನು ಅಳವಡಿಸಲಾಗುತ್ತಿದೆ.

ಉದ್ಯಾನವನದ ಹೆಚ್ಚು ಕಾಡಿನ ಪ್ರದೇಶ ಹಾಗೂ ಹುಲಿ ಇರುವ ಡಿ.ಬಿ.ಕುಪ್ಪೆ ವಲಯ ದಲ್ಲಿ ಹೆಚ್ಚಿನ ಕ್ಯಾಮೆರಾ ಹಾಕಲಾಗಿದೆ. ಸುಮಾರು ನಾಲ್ಕು ಚದರ ಕಿ.ಮಿ.ಗೆ ಒಂದರಂತೆ ಕ್ಯಾಮೆರಾ ಸ್ಥಾಪನೆಯಾಗಲಿದೆ. ಹುಲಿ ಗಣತಿ ಕಾರ್ಯ ಕ್ಯಾಮೆರಾ ಮೂಲಕ 45 ರಿಂದ 60 ದಿನಗಳ ಕಾಲ ನಡೆಯಲಿದೆ.  ಇದಕ್ಕಾಗಿ ನಿಯೋಜನೆಗೊಂಡ ಸಿಬ್ಬಂದಿ 2-3 ದಿನಕ್ಕೊಮ್ಮೆ ಕ್ಯಾಮೆರಾ ಚಿಪ್‍ನಲ್ಲಿರುವ ಫೋಟೋ ಡೌನ್‍ಲೋಡ್ ಮಾಡಿ ದಾಖಲು ಮಾಡುತ್ತಾರೆ. ಎಲ್ಲವನ್ನು ಕ್ರೋಢೀಕರಿಸಿ ಗಣತಿ ನಡೆಸಲಾಗುವುದು. ನಂತರ ಡೆಹರಾಡೂನ್‍ಗೆ ಮಾಹಿತಿ ಕಳುಹಿಸಲಾಗುತ್ತದೆ.  ಶೀಘ್ರ ಕಳೆದ ಸಾಲಿನ ಗಣತಿಯಿಂದ ಪತ್ತೆ ಹಚ್ಚಿರುವ ಹುಲಿಗಳ ಸಂಖ್ಯೆ ಪ್ರಕಟಿಸಲಾಗುವುದೆಂದು ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್ ಪತ್ರಿಕೆಗೆ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin