ನೈಸ್ ಸಂಸ್ಥೆಯ ಅಕ್ರಮದ ಕುರಿತು ಸದನ ಸಮಿತಿ ವರದಿ ಮಂಡನೆಗೆ ಬಿಜೆಪಿ-ಜೆಡಿಎಸ್ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

Session-01

ಬೆಳಗಾವಿ, ನ.30– ನೈಸ್ ಸಂಸ್ಥೆಯ ಅಕ್ರಮದ ಕುರಿತು ಅಧ್ಯಯನ ನಡೆಸಿ ಸದನ ಸಮಿತಿ ನೀಡಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಇಂದು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದ ಕಲಾಪ ಹಸ್ತವ್ಯಸ್ತಗೊಂಡು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ನಂತರ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಮುಂದಾದಾಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮತ್ತು ಉಪ ನಾಯಕ ಆರ್.ಅಶೋಕ್ ಅವರು ಸದನ ಸಮಿತಿ ವರದಿಯ ಕುರಿತು ಪ್ರಸ್ತಾಪಿಸಿ ತಕ್ಷಣವೇ ಇಲ್ಲಿ ಮಂಡಿಸಬೇಕೆಂದು ಆಗ್ರಹಿಸಿದರು.

ಸಮಿತಿಯ ಸದಸ್ಯರಾಗಿದ್ದವರು ಮತ್ತು ಹಿರಿಯ ಶಾಸಕರು ಪಕ್ಷ ಭೇದ ಮರೆತು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸದನ ಗೌರವ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಯಾವುದೇ ಅನುಮಾನಗಳು ಇರಬಾರದು ಎಂದಾದರೆ ತಕ್ಷಣವೇ ವರದಿ ಮಂಡಿಸಬೇಕು. ನೈಸ್ ಅಕ್ರಮಗಳ ಕುರಿತು ಸಮಗ್ರ ಚರ್ಚೆ ಆಗಬೇಕು. ತಪ್ಪುಗಳು ನಡೆದಿದ್ದರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದವು. ಸುದೀರ್ಘ ಚರ್ಚೆಗೆ ಸಭಾಧ್ಯಕ್ಷ ಕೋಳಿವಾಡ ಅವರು ಉತ್ತರ ನೀಡಿ ವರದಿಯನ್ನು ಮಂಡಿಸುವುದು, ಮುದ್ರಿಸುವುದು, ಹಂಚುವುದು ಸ್ಪೀಕರ್ ಅವರ ಪರಮಾಧಿಕಾರಕ್ಕೆ ಒಳಪಟ್ಟಿದೆ. ನಾನು ನನ್ನ ಜೀವನದಲ್ಲಿ ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕಬೇಕಾದರೆ ಅದರಲ್ಲಿರುವ ಅಂಶಗಳನ್ನು ಸಂಪೂರ್ಣವಾಗಿ ಮನವರಿಕೆ ಮಾಡಿಕೊಳ್ಳುತ್ತೇನೆ. ನನಗೆ ಪೂರ್ಣ ಮಾಹಿತಿ ಸಿಗದೇ ಇದ್ದರೆ ಯಾವುದಕ್ಕೂ ಸಹಿ ಹಾಕುವುದಿಲ್ಲ. ಇದು ನಾನು ನಡೆದು ಬಂದ ರೀತಿ ಎಂದರು.

ಸದನ ಸಮಿತಿ ಅಧ್ಯಕ್ಷರಾಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಜತೆ ಇದೇ ದಿನ ಚರ್ಚೆ ಮಾಡುತ್ತೇನೆ. ನನಗೆ ಸಂಪೂರ್ಣವಾಗಿ ಮನವರಿಕೆಯಾಗಿ ಸಮಾಧಾನವಾದರೆ ನಾಳೆಯೇ ವರದಿ ಮಂಡಿಸುವ ಪ್ರಯತ್ನ ಮಾಡುತ್ತೇನೆ. ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದರು. ಆದರೆ, ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸದನ ಸಮಿತಿ ಕೊಟ್ಟಿರುವ ವರದಿಯಲ್ಲಂತೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮತ್ತೆ ಯಾವ ಉದ್ದೇಶಕ್ಕೆ ಅದನ್ನು ತಡೆಹಿಡಿಯಲಾಗಿದೆ? ಈ ಕ್ಷಣವೇ ಇಲ್ಲಿ ಮಂಡನೆ ಮಾಡಿ ಎಂದು ಒತ್ತಾಯಿಸಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಜೆಡಿಎಸ್ನ ಸದಸ್ಯರೂ ಕೂಡ ಧರಣಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ದಿನ ಚರ್ಚೆ ಮಾಡಿ, ವರದಿ ಮಂಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಮತ್ತೆ ಧರಣಿ ನಡೆಸುತ್ತಿರುವುದು ಏಕೆ ಎಂದು ಪ್ರತಿಪಕ್ಷದ ಸದಸ್ಯರನ್ನು ಪ್ರಶ್ನಿಸಿದರು. ಸರ್ಕಾರ ವರದಿ ಮಂಡಿಸಲು ಅಡ್ಡಿಪಡಿಸುತ್ತಿದೆ ಎಂಬ ಅನುಮಾನ ಇದೆ ಎಂದು ಕೆಲ ಶಾಸಕರು ಆರೋಪಿಸಿದಾಗ ನಮ್ಮ ಸರ್ಕಾರದ ಕಾನೂನು ಸಚಿವರೇ ಸಮಿತಿ ಅಧ್ಯಕ್ಷರು. ಅವರೇ ವರದಿ ನೀಡಿದ್ದಾರೆ. ಅದನ್ನು ತಡೆಹಿಡಿಯುವ ಅಗತ್ಯ ನಮಗಿಲ್ಲ. ಇದರಲ್ಲಿ ನಮ್ಮ ಸರ್ಕಾರದ ಪಾತ್ರವೂ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಧರಣಿಯಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾದಾಗ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ತಡೆಯಾಜ್ಞೆ ತರುವ ತಯಾರಿ:’

ಸದನ ಸಮಿತಿ ವರದಿಯ ಕುರಿತು ಆರಂಭದಲ್ಲಿ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್ ಅವರು, ಜಯಚಂದ್ರ ಅವರ ಸಮಿತಿ ಅಧ್ಯಯನ ನಡೆಸಿರುವ ಪ್ರಕಾರ ನೈಸ್ ಹಗರಣದಲ್ಲಿ ಅಕ್ರಮ ಆಗಿದೆ. ಈ ಮೋಸದ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಈವತ್ತಿಗೆ ಸದನ ಸಮಿತಿಯ ಅವಧಿ ಮುಗಿದಿದೆ. ವರದಿ ಮಂಡನೆಗೆ ತಡೆಯಾಜ್ಞೆ ತರಲು ನೈಸ್ ಸಂಸ್ಥೆ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸುತ್ತಿರುವ ಮಾಹಿತಿ ಇದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. ಸಮಿತಿಯ ಸದಸ್ಯರಾಗಿರುವ ಬಿಜೆಪಿ ಶಾಸಕ ನಂದೀಶ್ ರೆಡ್ಡಿ, ಸಾಕಷ್ಟು ಅಧ್ಯಯನ ನಡೆಸಿ ಸಾಕ್ಷಿ ಪುರಾವೆಗಳನ್ನು ಕಲೆಹಾಕಿ ವರದಿ ಸಿದ್ದ ಪಡಿಸಿದ್ದೇವೆ. ಅದನ್ನು ತಕ್ಷಣವೇ ಇಲ್ಲಿ ಮಂಡಿಸಬೇಕು ಎಂದರು.

ಇನ್ನೊಬ್ಬ ಸದಸ್ಯ ಎಸ್.ಆರ್.ವಿಶ್ವನಾಥ್ ಮಾತನಾಡಿ, ಹಿಂದೆ ಕಾಗೋಡು ತಿಮ್ಮಪ್ಪ ಅವರು ಸಭಾಧ್ಯಕ್ಷರಾಗಿದ್ದಾಗ ನೈಸ್ ಅಕ್ರಮದ ಚರ್ಚೆ ಆಗಿತ್ತು. ಆ ಸಂದರ್ಭದಲ್ಲಿ ಈ ಸದನ ಮಾರಾಟಕ್ಕಿಲ್ಲ ಎಂದು ಕಾಗೋಡು ತಿಮ್ಮಪ್ಪ ಅವರು ದಿಟ್ಟವಾಗಿ ಹೇಳಿದ್ದರು. ಅದರಂತೆ ಸದನ ಸಮಿತಿ ರಚನೆಯಾಗಿತ್ತು. ಯಾವುದೇ ಒತ್ತಡ, ಬೆದರಿಕೆಗೆ ಬಗ್ಗದ ಸಮಗ್ರ ವರದಿಯನ್ನು ನ.24ರಂದು ಸ್ಪೀಕರ್ ಅವರಿಗೆ ನೀಡಲಾಗಿದೆ. ಸುಮಾರು 22ಸಾವಿರ ಕೋಟಿ ರೂ.ಗಳ ಹಗರಣವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು. ನಂತರ ಸಮಿತಿಯ ಸದಸ್ಯರಾದ ಕೆ.ಎಂ.ಶಿವಲಿಂಗೇಗೌಡರು ಮಾತನಾಡಲು ಮುಂದಾದರೂ, ಅದಕ್ಕೂ ಮೊದಲು ಸಭಾಧ್ಯಕ್ಷರು ಬಿಜೆಪಿ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಮತಿ ನೀಡಿದರು. ಇದಕ್ಕೆ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸ್ಪೀಕರ್ ಅವರ ಅನುಮತಿ ಪಡೆದು ಮಾತನಾಡಿದ ಕಾಗೇರಿ ಅವರು, ಸದನ ಸಮಿತಿಯ ವರದಿಗಳನ್ನು ಮಂಡಿಸುವುದು, ಬಿಡುವುದು ಸಭಾಧ್ಯಕ್ಷರ ವಿವೇಚನೆಗೆ ಸೇರಿದ ವಿಷಯ. ಆದರೆ, ಇದು ಸೂಕ್ಷ್ಮವಾದ ವಿಷಯವಾಗಿದ್ದು, ಸಮಿತಿಯ ವರದಿಯನ್ನು ಇಲ್ಲಿ ಮಂಡಿಸದೇ ಇದ್ದರೆ ಯವುದೋ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆರೋಪಕ್ಕೆ ಸಭಾಧ್ಯಕ್ಷರು ಗುರಿಯಾಗಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಅನುಮಾನಗಳು, ಚರ್ಚೆಗಳಿಗೆ ಅವಕಾಶ ಇಲ್ಲದಂತೆ ಕೂಡಲೇ ವರದಿಯನ್ನು ಇಲ್ಲಿ ಮಂಡಿಸಿ ಎಂದು ಸಲಹೆ ನೀಡಿದರು.  ನಂತರ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ ಅವರು, ಸದನ ಸಮಿತಿ ಒಟ್ಟು 30 ಸಭೆಗಳನ್ನು ಮಾಡಿದೆ. ಅದರಲ್ಲಿ 10 ಸಭೆಗಳಿಗೆ ಟಿಎ, ಡಿಎ ಪಡೆದಿಲ್ಲ. ಉತ್ತಮ ವರದಿ ಸಿದ್ದಪಡಿಸಲಾಗಿದೆ. ಸಮಿತಿ ವರದಿಯನ್ನು ಕೂಡಲೇ ಇಲ್ಲಿ ಮಂಡಿಸಿ. ಇಲ್ಲದೇ ಹೋದರೆ ನೈಸ್ ಸಂಸ್ಥೆ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಬೇಕಾಗುತ್ತದೆ.

ನಿನ್ನೆ ಇದೇ ವಿಷಯ ಚರ್ಚೆಯಾದಾಗ ಅವಧಿ ಮುಗಿದಿದ್ದರೆ ಇನ್ನೂ 2-3 ತಿಂಗಳು ವಿಸ್ತರಿಸಲು ಸಿದ್ಧ ಎಂದು ನೀವು ಹೇಳಿದ್ದೀರಿ. ವರದಿ ಸಲ್ಲಿಕೆಯಾಗಿದೆ. ಸಮಿತಿ ಅವಧಿ ವಿಸ್ತರಿಸುವ ಅಗತ್ಯ ಇಲ್ಲ. ಸದನ ಸಮಿತಿಯ ವರದಿಗಳನ್ನು ಯಾವ ಸ್ಪೀಕರ್ ಅವರು ತಡೆ ಹಿಡಿದ ಉದಾಹರಣೆಗಳಿಲ್ಲ. ನೀವು ವಿಳಂಬ ಮಾಡುತ್ತಿರುವುದು ಏಕೆ ಎಂದು ನೇರವಾಗಿ ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಸ್ಪೀಕರ್ ಅವರು, ನಿಮಗೆ ಉತ್ತರ ನೀಡಲು ಇಲ್ಲಿ ಕುಳಿತಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ನೀವು ನನಗೆ ನಿರ್ದೇಶನ ಮಾಡಬೇಡಿ ಎಂದು ಖಾರವಾಗಿ ಹೇಳಿದರು. ಸರಿ. ನಿಮ್ಮ ಇಷ್ಟ ಬಂದಾಗೆ ಮಾಡಿಕೊಳ್ಳಿ ಎಂದು ಶಿವಲಿಂಗೇಗೌಡರು ಕುಳಿತುಕೊಂಡರು. ರೈತ ಸಂಘದ ಅಧ್ಯಕ್ಷರೂ ಆದ ಶಾಸಕ ಪುಟ್ಟಣ್ಣಯ್ಯ ಮಾತನಾಡಿ, 18 ವರ್ಷಗಳ ಹಿಂದೆ 25 ಸಾವಿರ ಎಕರೆಯನ್ನು ನೈಸ್ ಸಂಸ್ಥೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಯಿತು. ರೈತರು ಆ ಭೂಮಿಯಲ್ಲಿ ಉಳಿಮೆ ಮಾಡುವಂತಿಲ್ಲ, ಮಾರಾಟ ಮಾಡುವಂತಿಲ್ಲ. ನೈಸ್ ಸಂಸ್ಥೆ 6-7ಸಾವಿರ ಎಕರೆಯನ್ನು ಈಗಾಗಲೇ ಮಾರಾಟ ಮಾಡಿಕೊಂಡಿದೆ. ಅತಂತ್ರ ಸ್ಥಿತಿಗೆ ಸಿಲುಕಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಕೂಡಲೇ ರೈತರ ನೆರವಿಗೆ ದಾವಿಸಿ ಎಂದು ಮನವಿ ಮಾಡಿದರು. ಆರ್. ಅಶೋಕ್ ಮಾತನಾಡಿ, ನಾನು ಉತ್ತರಹಳ್ಳಿ ಕ್ಷೇತ್ರದ ಶಾಸಕನಾಗಿದ್ದಾಗ ನೈಸ್ ಕಾಮಗಾರಿ ಆರಂಭವಾಯಿತು. ಆ ಸಂದರ್ಭದಲ್ಲೇ ನಾನು ಇದರಲ್ಲಿ 30 ಸಾವಿರ ಕೋಟಿ ಹಗರಣ ಇದೆ ಎಂದು ಆರೋಪ ಮಾಡಿ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದೆ. ಈ ವರದಿಯನ್ನು ತಡೆ ಹಿಡಿಯುವಲ್ಲಿ ಫವರ್ಫುಲ್ ಮನಿಸ್ಟರ್ ಮತ್ತು ಉನ್ನತ ಸಚಿವರ ಕೈವಾಡ ಇದೆ ಎಂದು ಪತ್ರಿಕೆಗಳಲ್ಲಿ ಬಂದಿದೆ ಎಂದಾಗ ಮಧ್ಯ ಪ್ರವೇಶಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಅವರು, ನಾನು ಕೂಡ ಸಮಿತಿಯ ಸದಸ್ಯನಾಗಿದ್ದು, ವರದಿಗೆ ಸಹಿ ಹಾಕಿಕೊಟ್ಟಿದ್ದೇನೆ. ಮಂಡನೆಗೆ ನಾನು ಯಾವುದೇ ಅಡ್ಡಿ ಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ಶಾಸಕರು ಮತ್ತು ಸಮಿತಿಯ ಸದಸ್ಯರಾದ ಜೆ.ಆರ್.ಲೋಬೋ ಮತ್ತು ರಫೀಕ್ ಅಹಮ್ಮದ್, ಜೆಡಿಎಸ್ ಸದಸ್ಯ ಸುಧಾಕರ್ಲಾಲ್ ಅವರು ಮಾತನಾಡಿ, ವರದಿ ಮಂಡನೆಗೆ ಒತ್ತಾಯಿಸಿದರು. ಅಂತಿಮವಾಗಿ ಸ್ಪೀಕರ್ ಉತ್ತರದಿಂದ ಕೆರಳಿದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಮತ್ತೆ ಸದನ ಸಮಾವೇಶಗೊಂಡಾಗಲು ಧರಣಿ ಮುಂದುವರೆಯಿತು.
ನಾಳೆ ಸಮಿತಿಯ ವರದಿಯನ್ನು ಮಂಡಿಸುವುದಾಗಿ ಸ್ಪೀಕರ್ ಸ್ಪಷ್ಟ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಶಾಸಕರು ಧರಣಿ ಹಿಂಪಡೆದು ಮುಂದಿನ ಸಮಾವೇಶಕ್ಕೆ ಅವಕಾಶ ಮಾಡಿಕೊಟ್ಟರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin