ಹುತಾತ್ಮ ಮೇಜರ್ ಅಕ್ಷಯ್ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Akshay-Girish-Kumar-04

ಬೆಂಗಳೂರು, ನ.30-ಕಾಶ್ಮೀರದ ಜಮ್ಮು ಹೊರವಲಯದ ನಗ್ರೋಟಾದಲ್ಲಿ 16 ಕೋರ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್‍ಕುಮಾರ್ (31) ಅವರ ಪಾರ್ಥಿವ ಶರೀರವನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ನಾಳೆ ಬೆಂಗಳೂರಿಗೆ ತರಲಾಗುವುದು.  ಯಲಹಂಕದ ಜೇಡ್ ಗಾರ್ಡನ್‍ನಲ್ಲಿರುವ ಅವರ ನಿವಾಸಕ್ಕೆ ನಾಳೆ ಪಾರ್ಥಿವ ಶರೀರವನ್ನು ತರಲಾಗುವುದು. ಆನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಮೇಜರ್ ಅಕ್ಷಯ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ದೆಹಲಿಯಲ್ಲಿರುವ ಉನ್ನತ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿನ್ನೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೇಜರ್ ಸೇರಿದಂತೆ ಏಳು ಯೋಧರು ಹುತಾತ್ಮರಾಗಿದ್ದರು. ಅಕ್ಷಯ್ ತಂದೆ ಗಿರೀಶ್ ಮತ್ತು ತಾಯಿ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದಾರೆ. ಹುತಾತ್ಮ ಅಕ್ಷಯ್‍ಗೆ ಪತ್ನಿ ಸಂಗೀತಾ ರವೀಂದ್ರನ್ ಮತ್ತು 2 ವರ್ಷದ ಮಗುವಿದೆ. ಅವರ ಪತ್ನಿ ಮತ್ತು ಮಗುವಿನೊಂದಿಗೆ ಅವರು ನಗ್ರೋಟಾದಲ್ಲಿ ನೆಲೆಸಿದ್ದರು. ಅಕ್ಷಯ್ ಹುತಾತ್ಮರಾದ ಬಗ್ಗೆ ರಕ್ಷಣಾ ಇಲಾಖೆಯಿಂದ ನಿನ್ನೆ ಸಂಜೆ ಮಾಹಿತಿ ಲಭಿಸಿದ ನಂತರ ಅವರ ತಂದೆ ಮತ್ತು ತಾಯಿ ವಿಮಾನದ ಮೂಲಕ ಜಮ್ಮುವಿಗೆ ತೆರಳಿದ್ದರು. ನಾಳೆ ಐಎಎಫ್ ವಿಮಾನದಲ್ಲಿ ಪಾರ್ಥವ ಶರೀರವನ್ನು ಬೆಂಗಳೂರಿಗೆ ತರಲಿರುವ ಪೊಷಕರು ಮತ್ತು ಉನ್ನತಾಧಿಕಾರಿಗಳು ಯಲಹಂಕದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ.

ಮುಂಬೈನಲ್ಲಿ ನವೆಂಬರ್ 26ರಂದು ನಡೆದ ಭಯೋತ್ಪಾದರ ದಾಳಿಗೆ ಹುತಾತ್ಮರಾದ ಸಂದೀಪ್ ಉನ್ನಿಕೃಷ್ಣನ್ ಅವರೂ ಕೂಡ ಬೆಂಗಳೂರಿನ ಯಲಹಂಕದವರೇ. ಅವರ ತಂದೆ-ತಾಯಿ ಈಗಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಹುತಾತ್ಮ ಯೋಧ ಅಕ್ಷಯ್ ಗಿರೀಶ್‍ಕುಮಾರ್‍ಗೆ ಸಿಎಂ ಸಂತಾಪ

ಬೆಂಗಳೂರು, ನ.30-ಜಮ್ಮು-ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಬೆಂಗಳೂರಿನ ಯೋಧ ಮೇಜರ್ ಅಕ್ಷಯ್ ಗಿರೀಶ್‍ಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಗಿರೀಶ್ ಅವರು ನಮ್ಮ ನಾಡಿನ ಹೆಮ್ಮೆಯ ಪುತ್ರ ಎಂದು ಪ್ರಶಂಸಿಸಿರುವ ಅವರು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ತಂದೆಗೆ ದೂರವಾಣಿ ಕರೆ: 

ಅಕ್ಷಯ್‍ಕುಮಾರ್ ಅವರ ತಂದೆ ಕ್ಯಾಪ್ಟನ್ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದರು. ಅಕ್ಷಯ್ ಗಿರೀಶ್‍ಕುಮಾರ್ ಅವರ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin