ಬೆಳಗಾವಿ ಅಧಿವೇಶನಕ್ಕೆ ಜನ ಪ್ರತಿನಿಧಿಗಳು ಹಾಜರಾಗದಿರುವುದಕ್ಕೆ ನೋಟ್ ಬ್ಯಾನ್ ಕಾರಣವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.1- ಉತ್ತರ ಕರ್ನಾಟಕ ವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಪವಾದವಿದೆ. ಈ ಅಪವಾದವನ್ನು ತೊಡೆದು ಹಾಕಬೇಕು ಎಂಬ ಉದ್ದೇಶ ದಿಂದಲೇ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಆದರೆ, ಇಂತಹ  ಅಧಿವೇಶನಕ್ಕೆ ಆ ಭಾಗದ ಜನ ಪ್ರತಿನಿಧಿಗಳೇ ಗೈರು ಹಾಜರಾಗುವ ಮೂಲಕ ತಮ್ಮ ಅಸಮರ್ಥತೆ ಪ್ರದರ್ಶಿಸುತ್ತಿದ್ದಾರೆ. ಬಹುತೇಕ ಶಾಸಕರು ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾಗಲು 500, 1000ರೂ. ಮುಖಬೆಲೆಯ ನೋಟು ನಿಷೇಧವಾಗಿರುವುದು ಕಾರಣವಿರಬಹುದು ಎಂಬ ಗುಸುಗುಸು ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.
ಇದಲ್ಲದೆ ಹುಬ್ಬಳ್ಳಿಯಲ್ಲಿ ಶಾಸಕರಿಗೆ ವಾಸ್ತವ್ಯಕಲ್ಪಿಸಿರುವುದ ರಿಂದ ಅಲ್ಲಿಂದ ಬೆಳಗಾವಿಗೆ ಬರಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Session-01

ಅಧಿವೇಶನ ಅಂತ್ಯಗೊಳ್ಳುವ ಕಾಲ ಸಮೀಸುತ್ತಿದ್ದರೂ ಉತ್ತರ ಕರ್ನಾಟಕ ಭಾಗದವರೂ ಸೇರಿದಂತೆ 11 ಮಂದಿ ಶಾಸಕರು ಇದುವರೆಗೂ ಸದನಕ್ಕೆ ಗೈರು ಹಾಜರಾಗಿದ್ದಾರೆ. ಅಂಬರೀಶ್, ಆನಂದ್‍ಸಿಂಗ್, ಬಾಬೂ ರಾವ್ ಚಿಂಚನಸೂರು, ಮನೋಹರ್ ಎಚ್.ತಹಸೀಲ್ದಾರ್, ಅಶೋಕ್ ಖೇಣಿ, ದತ್ತಾತ್ರೇಯ ಸಿ.ಪಾಟೀಲ್ ರೇವೂರ್, ಜಿ.ನಾಗೇಂದ್ರ, ವೈ.ಎನ್.ರುದ್ರೇಶ್‍ಗೌಡ, ಸಿ.ಎಚ್.ಸುರೇಶ್‍ಬಾಬು, ಯಶವಂತರಾಯಗೌಡ, ವಿಠಲಗೌಡ ಪಾಟೀಲ್, ರಾಜವೆಂಕಟಪ್ಪ ನಾಯಕ ಇವರ್ಯಾರೂ ಈವರೆಗಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿಯೇ ಇಲ್ಲ.

ಇವರ ಪೈಕಿ ದತ್ತಾತ್ರೇಯ ಸಿ.ಪಾಟೀಲ್, ಮಹೋಹರ ತಹಸೀ ಲ್ದಾರ್, ಅಶೋಕ್ ಖೇಣಿ ಅವರು ಗೈರು ಹಾಜರಾಗಲು ಸಭಾಧ್ಯಕ್ಷರಿಂದ ಅನುಮತಿ ಪಡೆದುಕೊಂಡಿ ದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಹದಾಯಿ ಚರ್ಚೆಯನ್ನು ಹೊರತು ಪಡಿಸಿದರೆ. ಉತ್ತರ ಕರ್ನಾಟಕ ಭಾಗದ ಗಂಭೀರ ಸಮಸ್ಯೆಗಳ ಬಗ್ಗೆ ಈವರೆಗೂ ಚರ್ಚೆಯಾಗಿಲ್ಲ. ಮಹದಾಯಿ ವಿಷಯವು ಚರ್ಚೆಯಾಗ ಶಾಸಕರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆದರೆ, ಫಲಶೃತಿ ಮಾತ್ರ ಶೂನ್ಯವಾಗಿದೆ. ಸರ್ಕಾರ ಎಲ್ಲಾ ರೀತಿಯಲ್ಲೂ ಕೇಂದ್ರ ಮಧ್ಯಸ್ಥಿಕೆಗೆ ಬೆರಳು ತೋರಿಸಿ ಜಾರಿಕೊಳ್ಳುತ್ತಿದೆ. ಬರ ಪರಿಸ್ಥಿತಿಯ ಬಗ್ಗೆ ಗಂಭೀರ ಚರ್ಚೆಯಾಗಿದ್ದನ್ನು ಹೊರತು ಪಡಿಸಿ ಉಳಿದ ವಿಷಯಗಳು ಸದನದಲ್ಲಿ ಪ್ರಸ್ತಾಪವಾಗಿಲ್ಲ. ಇನ್ನೆರಡು ದಿನಗಳು ಮಾತ್ರ ಅಧಿವೇಶನ ಬಾಕಿ ಇದ್ದು, ಅದರಲ್ಲಿ ರಾಜಕೀಯ ವಿಷಯಗಳ ಬಗ್ಗೆ ಬಹಳಷ್ಟು ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ.

ಶಾಸಕರ ನಿರಾಸಕ್ತಿ:

ಈವರೆಗೂ ನಡೆದ ಅಧಿವೇಶನಗಳಲ್ಲಿ 224 ಮಂದಿ ಶಾಸಕರ ಪೈಕಿ ಹಾಜರಾಗಿರುವವರ ಸಂಖ್ಯೆ 160ರ ಗಡಿದಾಟಿಲ್ಲ. ನ.21ರ ಮೊದಲ ದಿನ 147, ನ.22ರಂದು 160, 23ರಂದು 158, 24ರಂದು 146, 25ರಂದು 116, ನ.29ರಂದು 150 ಮಂದಿ ಮಾತ್ರ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಇನ್ನು ಕೆಲವರು ಕಾಟಾಚಾರಕ್ಕೆ ಬಂದು ಸಹಿ ಹಾಕಿ ಒಳಹೋದರೆ ಬಹಳಷ್ಟು ಜನ ಸದನದಿಂದ ದೂರ ಉಳಿದಿದ್ದಾರೆ. ಒಟ್ಟಾರೆ ಮಹತ್ವದ ಉದ್ದೇಶಗಳನ್ನು ಇಟ್ಟುಕೊಂಡು ಬೆಳಗಾವಿ ಅಧಿವೇಶನದ ಬಗ್ಗೆ ಸಾಕಷ್ಟು ನಿರಾಸಕ್ತಿ ಕಂಡು ಬಂದಿದೆ. ನೋಟು ನಿಷೇಧದವು ಈ ನಿರಾಸಕ್ತಿ ಕಾರಣ ಎಂದು ಮೊಗಸಾಲೆಯಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin