ಐಟಿ ದಾಳಿಯಲ್ಲಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಕಪ್ಪು ಹಣದಲ್ಲಿ ರಾಜ್ಯ ಸರ್ಕಾರದ ಕೈವಾಡವಿದೆ : ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Notes Jayachanda-chikkarayappa-m

ಬೆಳಗಾವಿ,ಡಿ.2-ಐಟಿ ಅಧಿಕಾರಿಗಳನ್ನು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ವಿವಿಧ ಅಧಿಕಾರಿಗಳ ಮನೆಯಲ್ಲಿ ಕೋಟ್ಯಂತರ ನಗದು ಹಾಗೂ ಚಿನ್ನಾಭರಣ ದೊರೆತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಈ ಕಪ್ಪು ಹಣದಲ್ಲಿ ಸರ್ಕಾರದ ಕೈವಾಡವಿದೆ. ಕೂಡಲೇ ಭ್ರಷ್ಟ ಸರ್ಕಾರ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.  ಆದರೆ ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸಚಿವರು ಕಾನೂನು ತನ್ನ ಮಿತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಯತ್ನ ನಡೆಸಿದ್ದಾರೆ.  ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತೀವ್ರ ಇರಿಸುಮುರಿಸು ಉಂಟಾಗಿದೆ. ಸುವರ್ಣಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಸಿ.ಟಿ.ರವಿ, ಸೋಮಣ್ಣ ಮತ್ತಿತರರು ಅಕ್ರಮ ಹಣ ಪತ್ತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಮಾತನಾಡಿ, ಐಟಿ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡವರು ಸಿಎಂ ಆಪ್ತರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಇದರಲ್ಲಿ ಭಾಗಿಯಾಗಿರುವವರ ವಿಷಯ ಬಹಿರಂಗವಾಗಬೇಕು ಎಂದರು. ಹೊಸ ನೋಟು ಸಿಕ್ಕಿವೆ ಎಂದರೇನು? ಮುಖ್ಯಮಂತ್ರಿಗಳ ಮೇಲೆ ಅನುಮಾನ ಮೂಡುತ್ತದೆ. ದೊಡ್ಡವರ ಕೈವಾಡವಿದೆ. ಇಷ್ಟು ಹೊಸ ನೋಟುಗಳು ಯಾವ ಬ್ಯಾಂಕ್ನಿಂದ ಬಂದಿತ್ತು ಎಂದು ಕಿಡಿಕಾರಿದರು.  ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟ ಶಾಸಕರಾದ ಆರ್.ಅಶೋಕ್, ಇದು ಭ್ರಷ್ಟ ಸರ್ಕಾರ. ಸಾಮಾನ್ಯ ಅಧಿಕಾರಿಗೆ ನೀರಾವರಿ ನಿಗಮದ ಹುದ್ದೆ ನೀಡುವಲ್ಲಿ ಸರ್ಕಾರದ ಕುಮ್ಮಕ್ಕು ಇದೆ. ಪಾರದರ್ಶಕ ಆಡಳಿತ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಇಡೀ ಸರ್ಕಾರ ರಾಜೀನಾಮೆ ನೀಡಬೇಕು, ತಪ್ಪೆಸಗಿರುವ ಅಧಿಕಾರಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಮುಖ್ಯಮಂತ್ರಿಗಳು ಭ್ರಷ್ಟಾಚಾರ ರಹಿತ ಆಡಳಿತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದು ಯಾವ ರೀತಿಯ ಭ್ರಷ್ಟಾಚಾರ ಎಂದು ತಿಳಿಯುತ್ತಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಟೀಕಿಸಿದರು.  ಆರ್ಬಿಐನವರೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ ಎಂದರೆ ಏನು ಅರ್ಥ? ಈ ಘಟನೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು, ಕೇವಲ ಇವರನ್ನು ಅಮಾನತು ಮಾಡಿದರೆ ಸಾಲದು ಎಂದರು.

ಕೆ.ಎಸ್.ಈಶ್ವರಪ್ಪ ಮಾತನಾಡಿ, ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಹಣದ ಹಿಂದೆ ಪ್ರಭಾವಿ ಮಂತ್ರಿಗಳಿದ್ದಾರೆ. ಹಿರಿಯ ಅಧಿಕಾರಿಯ ಮನೆಯಲ್ಲಿ ಕಪ್ಪು ಹಣ ಸಿಕ್ಕಿದ್ದರೂ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  6 ಕೋಟಿಯಷ್ಟು ಹೊಸ ನೋಟು ಪತ್ತೆಯಾಗಿರುವುದರ ಹಿಂದೆ ಯಾರು ಇದ್ದಾರೆ ಎಂಬುದು ತಿಳಿಯಬೇಕು. ಇದರ ಹಿಂದಿರುವ ಬ್ಯಾಂಕ್ ಅಧಿಕಾರಿ ಯಾರು, ಇದಕ್ಕೆ ಪ್ರಭಾವ ಬೀರಿರುವವರು ಯಾರು ಈ ಎಲ್ಲ ವಿಷಯಗಳ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಇದೊಂದು ಆಘಾತಕಾರಿ ಘಟನೆ ಸಮಾಜವಾದಿ ಆಡಳಿತ ನಡೆಸುತ್ತೇವೆ ಎನ್ನುವವರ ಶಿಷ್ಯಂದಿರು ಸಿಕ್ಕಿಬಿದ್ದಿದ್ದಾರೆ. ಇಷ್ಟು ಬೇಗ ಕೋಟಿಗಟ್ಟಲೆ ಹೊಸ ನೋಟು ಎಲ್ಲಿಂದ ಬಂತು, ಅಧಿಕಾರಿಯೊಬ್ಬರ ಬಳಿಯೇ ಇಷ್ಟು ಹಣವಿದ್ದರೆ ಇನ್ನು ಇವರ ಹಿಂದಿರುವವರ ಬಳಿ ಎಷ್ಟು ನೋಟು ಇರಬಹುದು ಎಂದು ಪ್ರಶ್ನಿಸಿದರು.
ನೋಟು ರದ್ದತಿಯಿಂದಾಗಿ ಹಣವಿದ್ದರೂ ಕಂಗಾಲಾಗಿದ್ದಾರೆ. ಆದರೆ ಅಧಿಕಾರಿಗಳ ಬಳಿ ಇಷ್ಟು ಪ್ರಮಾಣದ ಹಣ ಹೇಗೆ ಬಂತು? ಇದು ಸ್ಯಾಂಪಲ್ ಅಷ್ಟೇ ಇಂಥ ಹಲವರು ಸಿಕ್ಕಿ ಬೀಳಲಿದ್ದಾರೆ ಎಂದರು.
ರೈತ ಮುಖಂಡ ಪುಟ್ಟಣ್ಣಯ್ಯ ಮಾತನಾಡಿ, ಕಾನೂನು ಕ್ರಮ ಕೈಗೊಳ್ಳಬೇಕು, ಅದಕ್ಕೂ ಮೊದಲು ಅವರನ್ನು ಅಮಾನತು ಮಾಡಬೇಕು, ಇಂತಹ ಅಧಿಕಾರಿಗಳು ಇನ್ನು ಎಷ್ಟಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮರ್ಥನೆ:

ಕಾನೂನು ಚೌಕಟ್ಟಿನಲ್ಲಿ ಐಟಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಂದಿನ ತನಿಖೆಯೂ ನಡೆಯಬೇಕಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.  ಮಹದೇವಪ್ಪ ಅವರಿಗೆ ಅಧಿಕಾರಿಗಳು ಆಪ್ತರೋ ಅಥವಾ ಅವರೇ ಭಾಗಿಯೋ ನನಗೆ ಗೊತ್ತಿಲ್ಲ. ನಮಗೆ ಬ್ಯಾಂಕ್ನಲ್ಲಿ ಸಿಗೋದು 2 ಸಾವಿರ ಮಾತ್ರ. ಆದರೆ ಈ ಪ್ರಮಾಣದ ಹಣ ದೊರಕಿರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳ ಅಮಾನತ್ತಿನ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.  ಕಾನೂನಿನಲ್ಲಿ ಯಾರು ದೊಡ್ಡವರಲ್ಲ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಚಿಕ್ಕರಾಯಪ್ಪ ಆತ್ಮೀಯರೇನೂ ಅಲ್ಲ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin